ಖಾನಾಪುರದಲ್ಲಿ ಅಕ್ರಮ ಸ್ಪಿರಿಟ್ ಸಾಗಣೆ ಪತ್ತೆ..

35.ಲಕ್ಷ ರೂ. ಮೌಲ್ಯದ ಮದ್ಯಸಾರ, ಟ್ಯಾಂಕರ್ ಜಪ್ತಿ…

ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿಯಿಂದ ಕಣಕುಂಬಿಗೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಮದ್ಯಸಾರ (ಸ್ಪಿರಿಟ್) ಸಾಗಾಣಿಕೆ ಮಾಡುತ್ತಿದ್ದ ಟ್ಯಾಂಕರ ಅನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಸೋಮವಾರ ಬೆಳಿಗ್ಗೆ ಸುಮಾರು 3:45 ಗಂಟೆಗೆ ಚಾಕಲೇಟ್ ಬಣ್ಣದ ಅಶೋಕ ಲೇಲ್ಯಾಂಡ್ ಕಂಪನಿಯ ಕೆಎ-22 ಬಿ-3793 ನೋಂದಣಿ ಸಂಖ್ಯೆಯ ಆರು ಚಕ್ರದ ಟ್ಯಾಂಕರ್ ವಾಹನದಲ್ಲಿ ಸುಮಾರು 14,000 ಲೀಟರ್ ಸ್ಪಿರಿಟ್ ಅನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಗಿದೆ.
ಪ್ರಕರಣದಲ್ಲಿ ಆರೋಪಿತನಾದ ಸಿದ್ದರಾಜು ಮುಟ್ಟಸ್ವಾಮಿ ಶೆಟ್ಟಿ (47), ನಿವಾಸಿ ಹೆಗ್ಗಿನವಾಳು, ತಾಲೂಕು ನಂಜನಗೂಡು, ಜಿಲ್ಲೆ ಮೈಸೂರು ಇತನಿಗೆ ಬಿಎನ್ಎಸ್ಎಸ್ ಕಾಯ್ದೆ 2023ರ ಕಲಂ 35(3)ರ ಅನ್ವಯ ಮುಂದಿನ ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಮಾಲೀಕನ ಪತ್ತೆ ಹಾಗೂ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಡಾ. ವೈ. ಮಂಜುನಾಥ, ಅಬಕಾರಿ ಅಪರ ಆಯುಕ್ತರು ಕೇಂದ್ರ ಸ್ಥಾನ ಬೆಳಗಾವಿ, ಎಫ್.ಎಚ್. ಚಲವಾದಿ, ಅಬಕಾರಿ ಜಂಟಿ ಆಯುಕ್ತರು ಜಾರಿ ಮತ್ತು ತನಿಖೆ ಬೆಳಗಾವಿ ವಿಭಾಗ, ಜಗದೀಶ ಎನ್.ಕೆ., ಅಬಕಾರಿ ಉಪ ಆಯುಕ್ತರು ಬೆಳಗಾವಿ ದಕ್ಷಿಣ ಜಿಲ್ಲೆ ಹಾಗೂ ವಿಜಯಕುಮಾರ ಜೆ. ಹಿರೇಮಠ, ಅಬಕಾರಿ ಅಧೀಕ್ಷಕರು ಇವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ.

ರವಿ ಎಂ. ಮುರಗೋಡ, ಅಬಕಾರಿ ಉಪ ಅಧೀಕ್ಷಕರು ಬೆಳಗಾವಿ ಉಪ ವಿಭಾಗ ಇವರ ನೇತೃತ್ವದಲ್ಲಿ ಮಂಜುನಾಥ ಮೇಳಗೇರಿ, ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾಳಿಯಲ್ಲಿ ನೂರುಲ್ಲಾ ಖಾನ್, ಸುನೀಲ ಎಸ್. ಪಾಟೀಲ ಹಾಗೂ ಅಬಕಾರಿ ಪೇದೆಗಳಾದ ವೈ.ಬಿ. ಪಾಟೀಲ, ವಿವೇಕಿ ಮತ್ತು ವಾಹನ ಚಾಲಕ ಪ್ರಕಾಶ ಭಾಗವಹಿಸಿದ್ದರು.
ಪ್ರಕರಣದಲ್ಲಿ ಜಪ್ತಿ ಮಾಡಲಾದ ಮುದ್ದೇಮಾಲಿನ ಮೌಲ್ಯ ರೂ.14 ಲಕ್ಷ, ಆರೋಪಿತನ ಮೊಬೈಲ್ ಮೌಲ್ಯ ರೂ.1,500 ಹಾಗೂ ವಾಹನದ ಮೌಲ್ಯ ರೂ.21 ಲಕ್ಷ ಸೇರಿ ಒಟ್ಟು ರೂ.35,01,500 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *