ಚೆನ್ನಮ್ಮ ವೃತ್ತದಲ್ಲಿ ಅಧಿಕಾರಿಗಳ ವಿರುದ್ದ ಆಕ್ರೋಶ್ ಹೋರ ಹಾಕಿ ದನಕರುಗಳೊಂದಿಗೆ ಬೃಹತ್ ಪ್ರತಿಭಟನೆ..
ಹಿಡಕಲ್ ಜಲಾಶಯ ಭೂ ಸಂತ್ರಸ್ತರ ಆಕ್ರೋಶದ ಜ್ವಾಲೆ..
ಬೆಳಗಾವಿ : ಹಿಡಕಲ್ ಜಲಾಶಯದ ಭೂ ಸಂತ್ರಸ್ತರ ಹೋರಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಧಿಕಾರಿಗಳ ನಿರಂತರ ವಿಳಂಬ ನೀತಿ ಹಾಗೂ ಕೋಟ್ಯಂತರ ರೂಪಾಯಿ ಲಂಚದ ಬೇಡಿಕೆಯನ್ನು ಖಂಡಿಸಿ, ನೂರಾರು ರೈತರು ತಮ್ಮ ದನಕರುಗಳೊಂದಿಗೆ ರಸ್ತೆಗಿಳಿದು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯಕ್ಕೆ ಭೂಮಿ ನೀಡಿ ಸಂತ್ರಸ್ತರಾದ ರೈತರು, ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಐತಿಹಾಸಿಕ ರಾಣಿ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು. ನೀರಾವರಿ ನಿಗಮದ ಮುಖ್ಯ ಅಭಿಯಂತರರ ಕಾರ್ಯಾಲಯದ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ಹೊರಹಾಕಿದ ರೈತರು, ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಸಂಚಾರ ವ್ಯತ್ಯಯಗೊಳಿಸಿದರು.
ಬಳಿಕ ಅಧಿಕಾರಿಗಳ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗುತ್ತಾ ಬೃಹತ್ ಪ್ರತಿಭಟನಾ ರ್ಯಾಲಿ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಪ್ರತಿಭಟಿಸಿದರು.
ಅಧಿಕಾರಿಗಳಿಂದ ಸಚಿವರಿಗೇ ತಪ್ಪು ಮಾಹಿತಿ ರೈತರ ಗಂಭೀರ ಆರೋಪ: ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿರಿಯ ರೈತ ಮುಖಂಡ ಬಾಳೇಶ್ ಮಾವನೂರ್ ಮಾತನಾಡಿ, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹತ್ತಾರು ಬಾರಿ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ಆದರೂ ನೀರಾವರಿ ನಿಗಮದ ಅಧಿಕಾರಿಗಳಾದ ರಾಜೇಶ್ ಅಮ್ಮಿನಭಾವಿ, ರಾಥೋಡ್, ಲಾಳೂರ ಹಾಗೂ ಪಟೇಲ್ ಮತ್ತಿತರರು ಸಚಿವರಿಗೂ ತಪ್ಪು ಮಾಹಿತಿ ನೀಡುತ್ತಾ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ. ಅಧಿಕಾರಿಗಳ ಈ ಬೇಜವಾಬ್ದಾರಿತನದಿಂದಾಗಿ ನೂರಾರು ಎಕರೆ ಜಮೀನಿನ ಪರಿಹಾರ ಕಾರ್ಯ ನನೆಗುದಿಗೆ ಬಿದ್ದಿದೆ,” ಎಂದು ಅಸಮಾಧಾನ ಹೋರ ಹಾಕಿದರು.

ದಾಖಲೆಗಳ ಮುಖಾಮುಖಿ ಪರಿಶೀಲನೆ: ಅಧಿಕಾರಿಗಳು ನೀಡಿರುವ ಉತ್ತರಗಳು ಹಾಗೂ ಅದಕ್ಕೆ ಆಧಾರವಾಗಿರುವ ದಾಖಲೆಗಳನ್ನು ಮುಖಂಡರ ಸಮ್ಮುಖದಲ್ಲೇ ಪರಿಶೀಲಿಸಲಾಗುವುದು. ರೈತರ ಪ್ರಕಾರ ವರದಿಯಲ್ಲಿರುವ ಕೊರತೆಗಳ ಬಗ್ಗೆ ಮುಕ್ತ ಚರ್ಚೆ ನಡೆಸಲಾಗುವುದು.
ಸರ್ಕಾರಕ್ಕೆ ಪ್ರತ್ಯೇಕ ವರದಿ: ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಗತ್ಯ ಬಿದ್ದರೆ ಜಿಲ್ಲಾಡಳಿತದ ಕಡೆಯಿಂದಲೂ ಸರ್ಕಾರಕ್ಕೆ ಪ್ರತ್ಯೇಕ ವರದಿಯನ್ನು ಕಳುಹಿಸಲಾಗುವುದು.
ಅಧಿಕಾರಿಗಳು ಹಾಗೂ ರೈತರೊಂಧಿಗೆ ಸಭೆಯ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರತಿಭಟನಾಕಾರರಿಗೆ ತಿಳಿಸಿದರು.
ಈ ವೇಳೆ ನೂರಾರು ಸಂಖ್ಯೆಯಲ್ಲಿ ರೈತರು ತಮ್ಮ ದನಕರುಗಳು, ಕುಟುಂಬಸ್ಥರೊಂದಿಗೆ ನ್ಯಾಯಕ್ಕಾಗಿ ಆಗ್ರಹಿ ಬೃಹತ್ ಪ್ತಿಭಟನೆಯಲ್ಲಿ ಪಾಲ್ಗೊಂಡಿದ್ದರು.