ತಗ್ಗು ಗುಂಡಿಗಳೇ ತುಂಬಿರುವ
ಜಿಲ್ಲಾಧಿಕಾರಿ ಕಚೇರಿಯ ಪಕ್ಕದ ರಸ್ತೆ.
ತಾಲೂಕು ಪಂಚಾಯತಿ, ಉಪ ನೊಂದಣಾಧಿಕಾರಿ ಕಚೇರಿಗೆ ಹೋಗಲು ಹೈರಾನಾದ ಜನತೆ..
ಇನ್ನಾದರೂ ಈ ರಸ್ತೆ ಸುಧಾರಿಸಲಿ ಎಂಬುದು ಸಾರ್ವಜನಿಕರ ಕೋರಿಕೆ..
ಬೆಳಗಾವಿ : ರಾಜ್ಯದ ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿರುವ, ರಾಜ್ಯದಲ್ಲಿಯೇ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿ ಇಂದು ಮೂಲಸೌಕರ್ಯಗಳ ಕೊರತೆಯಿಂದ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸುವರ್ಣ ವಿಧಾನಸೌಧ ಹೊಂದಿರುವ ಗಡಿ ಜಿಲ್ಲೆ ಬೆಳಗಾವಿ ಇದೀಗ “ಗುಂಡಿಗಳ ನಗರಿ”ಯಾಗಿ ಮಾರ್ಪಟ್ಟಿದೆ ಎಂಬ ಟೀಕೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಮಳೆ ಆರಂಭವಾದರೆ ಸಾಕು, ನಗರದ ಹಲವು ಪ್ರಮುಖ ರಸ್ತೆಗಳು ಕೆಸರುಗದ್ದೆಗಳಾಗಿ ಬದಲಾಗುತ್ತಿವೆ. ಅದರಲ್ಲೂ ಜಿಲ್ಲಾಧಿಕಾರಿ ಕಚೇರಿಯ ಪಕ್ಕದಲ್ಲಿರುವ ತಾಲೂಕು ಪಂಚಾಯತಿ ಕಚೇರಿಗೆ ತೆರಳುವ ರಸ್ತೆಯ ದುಸ್ಥಿತಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿದಿನ ಸಾವಿರಾರು ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ, ತಾಲೂಕು ನೊಂದಣಾಧಿಕಾರಿ ಕಚೇರಿ ಎದುರಿನಿಂದ ತಾಲೂಕು ಪಂಚಾಯತ ಕಚೇರಿ ಹೋಗುವ ರಸ್ತೆಯಲ್ಲಿ ಆಳವಾದ ಗುಂಡಿಗಳು, ಕೆಸರು ಹಾಗೂ ನೀರು ನಿಂತಿರುವುದರಿಂದ ಸಂಚಾರ ದುಸ್ತರವಾಗಿದ್ದು ಸಾರ್ವಜನಿಕರು, ಕಚೇರಿಯ ಸಿಬ್ಬಂದಿಗಳು ಹಾಗೂ ಅವರ ವಾಹನಗಳ ಸ್ಥಿತಿ ಹಾಳಾಗುತ್ತಿವೆ.
“ಜಿಲ್ಲಾಧಿಕಾರಿ ಕಚೇರಿ ಮದುವಣಗಿತ್ತಿಯಂತೆ ಹೊಳೆಯುತ್ತಿದೆ. ಆದರೆ ಅದರ ಪಕ್ಕದ ರಸ್ತೆ ಮಾತ್ರ ತಗ್ಗು ಗುಂಡಿಗಳಿಂದ ತುಂಬಿದೆ. ಸಮಸ್ಯೆಗಳನ್ನು ಪರಿಹರಿಸಬೇಕಾದ ಜಿಲ್ಲಾ ಆಡಳಿತದ ಕೇಂದ್ರ ಕಚೇರಿಯ ಪಕ್ಕದಲ್ಲೇ ಇಂತಹ ದುಸ್ಥಿತಿ ಇರುವುದು ವಿಪರ್ಯಾಸ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯನ್ನು ಜೀರ್ಣೋದ್ಧಾರಗೊಳಿಸಿ ಹೊಸ ರೂಪ ನೀಡಲಾಗಿದೆ. ಆದರೆ ಕಚೇರಿಯ ಪಕ್ಕದ ರಸ್ತೆ ಮತ್ತು ಸುತ್ತಮುತ್ತಲಿನ ಮೂಲಸೌಕರ್ಯಗಳು ಸಂಪೂರ್ಣ ಹದಗೆಟ್ಟಿದ್ದು, ಮಳೆಗಾಲದಲ್ಲಿ ಸಾರ್ವಜನಿಕರಿಗೆ ನರಕಯಾತನೆ ಆದಂತಾಗಿದೆ.
ಜಿಲ್ಲಾಧಿಕಾರಿಗಳು ಆದಷ್ಟು ಬೇಗ ತಮ್ಮ ಕಚೇರಿಯ ಪಕ್ಕದಲ್ಲಿ ಇರುವ ಈ ಕೆಟ್ಟುಹೋದ ರಸ್ತೆಯನ್ನು ಸರಿಪಡಿಸಿ ಜನತೆಗೆ ಹಾಗೂ ಸರ್ಕಾರಿ ಕಚೇರಿಗಳ ಸಿಬ್ಬಂದಿಗಳಿಗೆ ತಮ್ಮ ಕೆಲಸಕ್ಕಾಗಿ ಓಡಾಡಲು ಅನುಕೂಲ ಮಾಡಿ ಕೊಡಬೇಕೆಂದು ಸಾರ್ವಜನಿಕರ ಕೋರಿಕೆಯಾಗಿದೆ.
ವರದಿ ಪ್ರಕಾಶ ಬಿ ಕೆ..