ಸಾಮಾಜಿಕ, ರಾಜಕೀಯ ಕ್ರಾಂತಿಯಿಂದ ಹಿಂದುಳಿದವರಿಗೆ ಆಸರೆಯಾದ ಅರಸರು..

ಸಾಮಾಜಿಕ, ರಾಜಕೀಯ ಕ್ರಾಂತಿಯಿಂದ ಹಿಂದುಳಿದವರಿಗೆ ಆಸರೆಯಾದ ಅರಸರು..

ದೇವರಾಜ ಅರಸುರವರ 111ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ..

ಅಶೋಕ ಚಂದರಗಿ..

ಬೆಳಗಾವಿ : ಕರ್ನಾಟಕದಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ ಕ್ರಾಂತಿಕಾರಿ ಹೆಜ್ಜೆಗಳನ್ನು ಇರಿಸುವ ಮೂಲಕ ತಮ್ಮ
ಗಟ್ಟಿಯಾದ ಹೆಜ್ಜೆ ಗುರುತುಗಳನ್ನು ಮೂಡಿಸಿದ ದಿವಂಗತ
ಮುಖ್ಯಮಂತ್ರಿ ದೇವರಾಜ ಅರಸು ಅವರ 111 ನೇ
ಜಯಂತಿಯನ್ನು ಇದೇ ಆಗಸ್ಟ್ 20 ರಂದು ಬೆಳಗಾವಿ ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುತ್ತಿದೆ.

ಗುರುವಾರ ಆಗಸ್ಟ್ 6 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಯಂತಿಯ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾಡಳಿತ, ಪಾಲಿಕೆ ಹಾಗೂ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭಾಗಿಯಾದ ಈ ಸಭೆಯಲ್ಲಿ ಬೆಳಗಾವಿಯ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಅಶೋಕ ಚಂದರಗಿ ಅವರು ಅರಸು ಅವರ ಬಗ್ಗೆ ಅರ್ಥಪೂರ್ಣವಾಗಿ ಮಾತನಾಡಿ ಅವರ ಕೊಡುಗೆಗಳನ್ನು ನೆನೆದರು.

ಇಂದು ರಾಜ್ಯದಲ್ಲಿ ಮೀಸಲಾತಿಯ ಫಲಾನುಭವಿಗಳಾಗಿ ಹಿಂದುಳಿದ ವರ್ಗದ ಲಕ್ಷಾಂತರ ಜನರಿದ್ದಾರೆ. ಇಂತಹ ಸಭೆಗೆ ಅವರಲ್ಲಿ ಕೆಲವರಾದರೂ ಬಾರದಿರುವದು ತುಂಬ ಬೇಸರದ ಸಂಗತಿಯಾಗುತ್ತದೆ. 1972 ರಲ್ಲಿ ಮುಖ್ಯಮಂತ್ರಿಯಾದ ಅರಸು ಅವರು ಎಲ್.ಜಿ.ಹಾವನೂರ ಅವರ ನೇತೃತ್ವದ ಆಯೋಗ ನೇಮಿಸಿ ಮೀಸಲಾತಿಯನ್ನು ಘೋಷಿಸಿದಾಗ ರಾಜ್ಯದಲ್ಲಿ ಪ್ರಬಲ ಕೋಮುಗಳಿಂದ ಬಹುದೊಡ್ಡ ಪ್ರತಿಭಟನೆ, ಆಕ್ರೋಶ ವ್ಯಕ್ತಗೊಂಡಿದ್ದು ಈಗ ಇತಿಹಾಸ. ಅರಸು ಅವರು ಮೈಸೂರು ರಾಜ್ಯವನ್ನು “ಕರ್ನಾಟಕ” ಎಂದು ಮರುನಾಮಕರಣ ಮಾಡಿದ್ದು ಇನ್ನೂ ದೊಡ್ಡ ಇತಿಹಾಸವೇ ಸರಿ.

ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಎಂಬ ಮರು ನಾಮಕರಣ ಮಾಡಿದ್ದನ್ನು “The Hindu” ಇಂಗ್ಲಿಷ್
ದಿನಪತ್ರಿಕೆಯ 2022 , ಜುಲೈ 22 ರಂದು ಪ್ರಕಟವಾದ
“50 ವರ್ಷಗಳ ಹಿಂದೆ” ಕಾಲಂ ನಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ ವಿವರಿಸಿದೆ.

ಮರುನಾಮಕರಣ ಆಗಿದ್ದು 1973 ರ ನವೆಂಬರ್ ಒಂದರಂದು. ಅದಕ್ಕೂ ಒಂದು ವರ್ಷ ಮೊದಲು 1972 ,ಜುಲೈ 22 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಬೆಂಗಳೂರಿನಲ್ಲಿ ನಡೆಯಿತು. ವಿಧಾನಸಭೆ ಹಾಗೂ ವಿಧಾನ ಪರಿಷತ್ತು ಸದಸ್ಯರು ಸೇರಿ ಒಟ್ಟು 190 ಶಾಸಕರು ಶಾಸಕಾಂಗ ಪಕ್ಷದಲ್ಲಿದ್ದರು. ಅಂದಿನ ಸಭೆಯಲ್ಲಿ ಹಾಜರಿದ್ದವರು 131, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡುವ ಬಗ್ಗೆ ಚರ್ಚೆ ನಡೆಯಿತು. ಮೈಸೂರು ಭಾಗದ ಸಚಿವರು ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕಂದಾಯ ಸಚಿವರಾಗಿದ್ದ ಹುಚ್ಚಮಾಸ್ತಿಗೌಡ ಅವರು ಮಾತನಾಡಿ,1956 ರಲ್ಲಿ ಮೈಸೂರು ರಾಜ್ಯ ರಚನೆಯಾದಾಗಿನ ಸಂದರ್ಭದಲ್ಲಿ ಆಗಿರುವ ಒಪ್ಪಂದದಂತೆ ಮೈಸೂರು ಹೆಸರೇ ಮುಂದುವರೆಯಬೇಕು, ಹೀಗೆ ಹೇಳುವದು ನನ್ನ ಕರ್ತವ್ಯವೂ ಆಗಿದೆ ಎಂದು ಪ್ರತಿಪಾದಿಸಿದರು.

“ಮೈಸೂರು ಕರ್ನಾಟಕ”, “ಕನ್ನಡ ನಾಡು” ಎಂದು ನಾಮಕರಣ ಮಾಡಬೇಕೆಂಬ ಪ್ರಸ್ತಾವನೆಗಳನ್ನು ಸಹ ಸಭೆಯ ಮುಂದೆ ಇಡಲಾಯಿತು. ಆದರೆ ಅದಕ್ಕೆ ಬೆಂಬಲ ಸಿಗಲಿಲ್ಲ. ಸಭೆಯಲ್ಲಿದ್ದ ಮುಖ್ಯಮಂತ್ರಿ ಅರಸು ಅವರು ಕರ್ನಾಟಕ ಎಂಬ ಪ್ರಸ್ತಾವನೆಯನ್ನು ಬೆಂಬಲಿಸಿದರು. ಆಗ 131 ಶಾಸಕರ ಪೈಕಿ 89 ಶಾಸಕರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು. ಕರ್ನಾಟಕವೇ ಅಂತಿಮಗೊಂಡಿತು .

1956 ರ ನಂತರ ಯಾವದೇ ಮುಖ್ಯಮಂತ್ರಿಗಳು ಮರು ನಾಮಕರಣ ಮಾಡುವ ಧೈರ್ಯ ಮಾಡಿರಲಿಲ್ಲ.17 ವರ್ಷಗಳ ಕಾಲ ವಿಧಾನ ಸಭೆಯಲ್ಲಿ ಮರು ನಾಮಕರಣದ ವಿಷಯ ಪ್ರಸ್ತಾಪವಾದಾಗಲೆಲ್ಲ ವಾದ ಪ್ರತಿವಾದಗಳು ನಡೆದು ಮರು ನಾಮಕರಣ ನೆನೆಗುದಿಗೆ ಬೀಳುತ್ತಿತ್ತು. ಕೊನೆಗೆ 1972 ಕ್ಕೆ ಮರು ನಾಮಕರಣಕ್ಕೆ ಚಾಲನೆ ದೊರೆಯಿತು.

ಅರಸು ಅವರು ರಾಜ್ಯದ 24 ಸಂಸದರ ( ನಂತರ 28 ಆಯಿತು) ಸಭೆಯನ್ನು ಬೆಳಗಾವಿಯಲ್ಲಿ ನಡೆಸಿ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದದ ಹಿನ್ನೆಲೆಯಲ್ಲಿ ಕೈಕೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಿದರು.ಸರಕಾರಿ ಕಚೇರಿಗಳ ವಿಭಾಗೀಯ ಕಚೇರಿಗಳನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ಕ್ರಮ ಕೈಕೊಂಡವರು ಅವರೇ.

ಸಾಮಾಜಿಕವಾಗಿ, ರಾಜಕೀಯವಾಗಿ ಕ್ರಾಂತಿಕಾರಿ ಎನಿಸಿದ ಅರಸು ಅವರು ಹಿಂದುಳಿದ ವರ್ಗಗಳಿಗೆ ಮಾಡಿದ ಕೆಲಸಗಳು ಒಂದಲ್ಲ ಎರಡಲ್ಲ.ಅವರು ರಾಜಕೀಯವಾಗಿ ಬೆಳೆಸಿದ ಅನೇಕರು ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಅರಸು ಅವರ 111ನೇ ಜಯಂತಿಯನ್ನು ರಾಜ್ಯ ಸರಕಾರ ಇದೇ ಆಗಸ್ಟ್ 20 ರಂದು ಆಚರಿಸುತ್ತಿದೆ. ಹಿಂದೂಳಿದ ಇಲಾಖೆಯ ಈ ಸಂಭ್ರಮದ ಜಯಂತಿಯಲ್ಲಿ ನಾವೆಲ್ಲರೂ ಪಾಲ್ಗೊಂಡು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡೋಣ ಎಂದರು.

ಈ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ಕುರಿಹುಲಿ, ಮಹಾನಗರ ಪಾಲಿಕೆಯ ಉಪ ಆಯುಕ್ತ (ಆಡಳಿತ) ಉದಯಕುಮಾರ ತಳವಾರ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಹಿಂದೂಳಿದ ವರ್ಗಗಳ ಇಲಾಖೆಯ ವಿವಿಧ ತಾಲೂಕು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *