ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ದುರ್ಗಾಮಾತಾ ದೌಡ..

ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ದುರ್ಗಾಮಾತಾ ದೌಡ..

ಬೆಳಗಾವಿ: ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿರುವ ದುರ್ಗಾಮಾತಾ ದೌಡ್ ಭಾನುವಾರ ನಗರದಲ್ಲಿ ಸಡಗರ-ಸಂಭ್ರಮದಿಂದ ಜರುಗಿತು. ಎಂಟನೇ ದಿನದ ದೌಡ್‌ನಲ್ಲಿ ನವದುರ್ಗೆಯರ ವೈಭವ, ಛತ್ರಪತಿ ಶಿವಾಜಿ ಮಹಾರಾಜರ ವೇಷಭೂಷಣ ಹಾಗೂ ಸಾಂಪ್ರದಾಯಿಕ ಆಚರಣೆಗಳು ಭಕ್ತರ ಗಮನ ಸೆಳೆದವು.

ಶಹಾಪುರದ ನಾಥ ಪೈ ವೃತ್ತದಲ್ಲಿರುವ ಶ್ರೀ ಅಂಬಾಬಾಯಿ ಮಂದಿರದಿಂದ ಶ್ರದ್ಧಾಭಕ್ತಿಯೊಂದಿಗೆ ದೌಡ್ ಆರಂಭವಾಯಿತು. ಶ್ರೀ ದುರ್ಗಾಮಾತೆಗೆ ಮಹಾಮಂಗಳಾರತಿ ಸಲ್ಲಿಸಿ, ಪ್ರೇರಣಾ ಮಂತ್ರದೊಂದಿಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ರಸ್ತೆಯುದ್ದಕ್ಕೂ ಮಹಿಳೆಯರು ರಾತ್ರಿ ಇಡೀ ಶ್ರಮಿಸಿ ಬಿಡಿಸಿದ್ದ ವರ್ಣರಂಜಿತ ರಂಗೋಲಿಗಳು, ಭಕ್ತರು ಸಲ್ಲಿಸಿದ ಪುಷ್ಪವೃಷ್ಟಿ ಹಾಗೂ ಮಂಗಳಾರತಿಯ ದೃಶ್ಯಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ದೌಡ್ ಶಹಾಪುರದ ಮಹಾತ್ಮ ಫುಲೆ ರಸ್ತೆ, ಲಕ್ಷ್ಮೀ ರಸ್ತೆ, ಕಾರವಾರಿ ಗಲ್ಲಿ, ಗಣೇಶಪುರ ಗಲ್ಲಿ, ಬಸವೇಶ್ವರ ವೃತ್ತ, ಮಾರುತಿ ಗಲ್ಲಿ ಹಾಗೂ ಸಂಭಾಜಿ ರಸ್ತೆ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಶ್ರೀ ಜ್ಯೋತಿಬಾ ಅವರ ವೇಷಧಾರಿಗಳು ವಿಶೇಷ ಆಕರ್ಷಣೆಯಾಗಿದ್ದರು. ಪುಟ್ಟ ಬಾಲಕ ವಿಶ್ಲೇಶ್ ಹಟ್ಟಿಕರ್ ಜ್ಯೋತಿಬಾ ವೇಷದಲ್ಲಿ ಎಲ್ಲರ ಗಮನ ಸೆಳೆದನು. ಶಿವಾಜಿ ಮಹಾರಾಜರ ವಿಚಾರಧಾರೆ ಹಾಗೂ ಸಂಸ್ಕಾರಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದು ದೌಡ್‌ನ ಮುಖ್ಯ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದರು.

ಇದೇ ವೇಳೆ ಮೀರಾಪುರ ಗಲ್ಲಿಯಲ್ಲೂ ದುರ್ಗಾಮಾತಾ ದೌಡ್ ಸಂಭ್ರಮದಿಂದ ನಡೆಯಿತು. ನವದುರ್ಗೆಯರ ಒಂಬತ್ತು ಸ್ವರೂಪಗಳ ವಿಶಿಷ್ಟ ಪ್ರದರ್ಶನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಗಲ್ಲಿಯ ಯುವಕರು ರಾತ್ರಿ ಇಡೀ ಶ್ರಮಿಸಿ ಪತಾಕೆ ಹಾಗೂ ಅಲಂಕಾರಗಳಿಂದ ರಸ್ತೆಗಳನ್ನು ಸಿಂಗರಿಸಿದ್ದರು. ಬಳಿಕ ಖಡೆಬಜಾರ್, ಬಸವಣ ಗಲ್ಲಿ, ಸರಾಫ್ ಗಲ್ಲಿ, ಆಚಾರ್ಯ ಗಲ್ಲಿ ಹಾಗೂ ಪಿ.ಬಿ. ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಹೊಸೂರು ಬಸವಾಣ ಗಲ್ಲಿಯಲ್ಲಿ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *