ನಿಯಮಮೀರಿ ಪಿಐಡಿ ನೀಡಿದ ಅಧಿಕಾರಿ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಿ..
ನಗರ ಸೇವಕ ರವಿ ದೋತ್ರೆ..
ತಪ್ಪಿತಸ್ಥ ಅಧಿಕಾರಿ ಮೇಲೆ ಕಾನೂನು ತನಿಖೆ ಆಗಲಿ..
ಪ್ರೀತಿ ಕಾಮಕರ, ಮಹಾಪೌರರು ಬೆಳಗಾವಿ ಪಾಲಿಕೆ..
ಬೆಳಗಾವಿ : ಮಹಾನಗರ ಪಾಲಿಕೆಯ ವ್ಯಾಪ್ತಿಯ ಆಸ್ತಿಗಳಿಗೆ ಪಿಐಡಿ ದಾಖಲೆಗಳನ್ನು ನಿಯಮ ಬಾಹಿರವಾಗಿ ನೀಡಿದ ಪಾಲಿಕೆ ಅಕಾರಿಗಳ ಹಾಗೂ ಸಿಬ್ಬಂದಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಬೇಕು ಎಂಬ ನಗರ ಸೇವಕ ರವಿ ದೋತ್ರೆ ಅವರ ಪ್ರಸ್ತಾವಣೆಗೆ, ಕಾನೂನು ಕ್ರಮ ಜರುಗಿಸಬೇಕು ಎಂದು ಬುಧವಾರ ನಡೆದ ಪರಿಷತ್ ಸಭೆಯಲ್ಲಿ ನಿರ್ಧರಿಸಲಾಯಿತು.

ಹಲವು ಆಸ್ತಿಗಳಿಗೆ ಅವಸರವಾಗಿ, ಇಲಾಖೆಯ ನಿಯಮಗಳ ಪಾಲನೆ ಮಾಡದೇ ಪಿಐಡಿ ಸಂಖ್ಯೆ ನೀಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸೆಂಟ್ರಲ್ ವಲಯ ಉಪ ಆಯುಕ್ತರು ಸೇರಿದಂತೆ ಹಲವು ಅಕಾರಿಗಳಿಂದ ಪಿಐಡಿ ನೀಡುವಲ್ಲಿ ಲೋಪಗಳು ಆಗಿವೆ, ಆದ್ದರಿಂದ ಸೂಕ್ತ ವಿಚಾರಣೆ ಕೈಗೊಂಡು, ತಪ್ಪಿತಸ್ಥ ಅಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ನಗರ ಸೇವಕ ರವಿ ದೋತ್ರೆ ಅವರು ಒತ್ತಾಯಿಸಿದರು. ಈ ವೇಳೆ ಪಾಲಿಕೆ ಆಯುಕ್ತ ಕಾರ್ತಿಕ್ ಮತ್ತು ಉಪ ಮೇಯರ್ ಹನುಮಂತ ಕೊಂಗಾಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಂತಿಮವಾಗಿ ಮೇಯರ್ ಪ್ರೀತಿ ಕಾಮಕರ್ ಅವರು, ನಿಯಮ ಬಾಹಿರವಾಗಿ ಪಿಐಡಿ ನೀಡಿದ ಅಕಾರಿಗಳ ವಿರುದ್ಧ ಕಾನೂನು ತನಿಖೆ ಮಾಡಿಸಲು ಆಯುಕ್ತರಿಗೆ ಸೂಚಿಸಿದರು.

ಲೀಸ್ ಆಸ್ತಿ ಮಾಹಿತಿ ನೀಡಿ:
ನಗರಸೇವಕಿ ವಾಣಿ ಜೋಶಿ ಮಾತನಾಡಿ, ಮಹಾನಗರ ಪಾಲಿಕೆಯಿಂದ ಗುತ್ತಿಗೆ ಆದಾರದ ಮೇಲೆ ನೀಡಲಾದ ಆಸ್ತಿ ಮತ್ತು ಕಟ್ಟಡಗಳ ಮಾಹಿತಿ ನೀಡಬೇಕು. ಈ ಬಗ್ಗೆ ಸ್ಥಾಯಿ ಸಮಿತಿ ನಡಾವಳಿಯಲ್ಲಿ ಕೈಗೊಂಡ ಮಾಹಿತಿ ಅಪೂರ್ಣವಾಗಿದ್ದು, ಕೆಲವು ಕಟ್ಟಡಗಳನ್ನು ಸೇರಿಸಿಲ್ಲ ಎಂದು ಆರೋಪಿಸಿದರು. ಆಗ ಕಂದಾಯ ಉಪ ಆಯುಕ್ತ ಸಿದ್ದು ಹುಲ್ಲೋಳ್ಳಿ ಅವರು, ಕೆಲ ಆಸ್ತಿಗಳ ವ್ಯಾಜ್ಯ ಆಯುಕ್ತರ ಮತ್ತು ನ್ಯಾಯಾಲಯದಲ್ಲಿ ಬಾಕಿ ಇವೆ. ಹೀಗಾಗಿ ಎಲ್ಲ ಆಸ್ತಿಗಳ ಕುರಿತಿ ಮಾಹಿತಿ ನೀಡಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಆಗ ವಾಣಿ ಜೋಶಿ, ಲೀಸ್ ಆಸ್ತಿಗಳ ಪೂರ್ಣ ಮಾಹಿತಿ ನೀಡುವಂತ ಪಟ್ಟು ಹಿಡಿದಿದ್ದರಿಂದ, ಮೇಯರ್ ಅವರು, ಸ್ಥಾಯಿ ಸಮಿತಿ ನಡಾವಳಿಯನ್ನು ಮರು ಪರಿಶೀಲನೆ ಮಾಡಿ, ವರದಿ ನೀಡಲು ನಿರ್ದೇಶಿಸಿದರು.

ಮಳೆಗಾಲದೊಳಗೆ ಮುಗಿಸಿ:
ನಗರಸೇವಕ ರವಿ ಧೋತ್ರೆ ಮಾತನಾಡಿ, ನಗರದಲ್ಲಿ ನಾನಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮಳೆಗಾಲದ ಪೂರ್ವದಲ್ಲಿ ಅವುಗಳನ್ನು ಮುಕ್ತಾಯಗೊಳಿಸಬೇಕು. ಕೆಲವು ಕಾಮಗಾರಿಗಳಿಗೆ ಟೆಂಡರ್ ನಂತರವೊ ವಿಳಂಬ ಮಾಡಲಾಗುತ್ತಿದೆ. ಮಳೆಗಾಲದ ಮುಂಚಿತವಾಗಿ ರಸ್ತೆಯಲ್ಲಿನ ತಗ್ಗು- ಗುಂಡಿಗಳನ್ನು, ಚರಂಡಿ ಹಾಗೂ ನಾಲಾಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು.

ಮಹಿಳಾ ಮೀಸಲಾತಿ ಚರ್ಚೆ:
ಕೇದ್ರ ಸರಕಾರ ಲೋಕಸಭೆಯಲ್ಲಿ ಮಂಡಿಸಿದ ‘ನಾರಿ ಶಕ್ತಿ ವಂದನಾ ಅದಿನಿಯಮ’ಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರ ವಾಗ್ವಾದ ನಡೆಸಿದರು. ಶೇ. ೩೩ ಮಹಿಳಾ ಮೀಸಲು ಹೆಚ್ಚಿಸಲು ಕೇಂದ್ರ ಸರಕಾರ ಕೈಗೊಂಡ ನಿರ್ಧಾರಕ್ಕೆ ಕಾಂಗ್ರೆಸ್ ವಿರೋದಿಸಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯರು, ಮಹಿಳಾ ಮೀಸಲಿಗೆ ನಮ್ಮ ವಿರೋಧವಿಲ್ಲ ಎಂದು ಸಮರ್ಥಿಸಿಕೊಂಡರು. ಹೀಗಾಗಿ ಸಭೆಯಲ್ಲಿ ಕೆಲ ಹೊತ್ತು ಗದ್ದಲ ಉಂಟಾಯಿತು.

ಇನ್ನು ನಗರ ಸೇವಕ ಗಿರೀಶ್ ದೊಂಗಡಿ ಅವರು ಮಾತನಾಡಿ, ನಗರದ ಪ್ರಮುಖ ಟ್ರಾಫಿಕ್ ಸಿಗ್ನಲಗಳಲ್ಲಿ ಜನರಿಗೆ ಬಿಸಿಲಿನ ತಾಪ ತಡೆಯಲು ಪಾಲಿಕೆಯ ಸಭೆಯಲ್ಲಿ ಚರ್ಚಿಸಿ, ಪಾಲಿಕೆಯಿಂದ ನೆರಳು ಹೊದಿಕೆಯನ್ನು ನಿರ್ಮಿಸಿದ್ದೇವೆ. ಆದರೆ ಅದರ ಶ್ರೇಯಸ್ಸು ಜಿಲ್ಲಾಡಳಿತಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಹೋಗಿದ್ದು ಬೇಸರವಾಗಿದೆ, ಪಾಲಿಕೆಯಿಂದ ನಾವು ಎಲ್ಲಾ ಮಾಡುವಾಗ, ಪಾಲಿಕೆಗೆ ಅದರ ಶ್ರೇಯಸ್ಸು ಬರಬೇಕು ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.
ವರದಿ ಪ್ರಕಾಶ ಬಿ ಕೆ.