ಪಾಲಿಕೆಯಿಂದ ವಿಕಲ ಚೇತನರಿಗೆ ಯಂತ್ರಚಾಲಿತ (ಸ್ಕೂಟರ್) ವಾಹನ ವಿತರಣೆ..

ವಿಕಲಚೇತನರು ಹಿಂಜರಿಯದೆ ಸವಾಲುಗಳನ್ನು ಎದುರಿಸಿ..

ಶಾಸಕ ಆಸೀಫ್ ಸೇಠ್…

ಬೆಳಗಾವಿ : ವಿಕಲಚೇತನರಲ್ಲಿ ವಿಶೇಷವಾದ ಶಕ್ತಿ ಇದ್ದು, ಅವರು ಯಾವುದೇ ಕಾರಣಕ್ಕೂ ಭಯದಿಂದ ಹಿಂಜರಿಯದೆ ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಿ ಬದುಕು ರೂಪಿಸಿಕೊಳ್ಳಬೇಕೆಂದು ಶಾಸಕ ಆಸೀಫ್ ಸೇಠ್ ಹೇಳಿದರು.

ಗುರುವಾರ ಮಹಾನಗರ ಪಾಲಿಕೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆಯ ಬಡತನ ನಿರ್ಮೂಲನ ಕೋಶದಿಂದ ಶೇ.5 ಅನುದಾನದ ಯೋಜನೆಯಡಿ ವಿಕಲಚೇತನರಿಗೆ ಯಂತ್ರ ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರ ಹಾಗೂ ಪಾಲಿಕೆ ವಿಕಲಚೇತನರಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್ ಪ್ರೀತಿ ಕಾಮಕರ ಮಾತನಾಡಿ, ಪಾಲಿಕೆಯು ವಿಕಲಚೇತನರಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ತಂದಿದೆ. ಅವರ ಅಡಿಯಲ್ಲಿ ತ್ರಿಚಕ್ರ ವಾಹನಗಳನ್ನು ನೀಡುತ್ತಿದ್ದು , ಅವುಗಳಿಂದ ತಾವು ಸ್ವಾವಲಂಬಿಗಳಾಗಿ ಜೀವಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಉಪಮೇಯರ್ ಹಣಮಂತ ಕೊಂಗಾಲಿ ಮಾತನಾಡಿ, ಅರ್ಹ ಫಲಾನುಭವಿಗಳಿಗೆ ಮುಂದೆಯೂ ಸಹ ವಿವಿಧ ಯೋಜನೆಗಳ ಅಡಿಯಲ್ಲಿ ಪಾಲಿಕೆಯಿಂದ ಸಹಾಯ ಸಹಕಾರ ಲಭ್ಯವಾಗಲಿದೆ ಎಂದು ಹೇಳಿದರು.

ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಮಾತನಾಡಿ, ಪಾಲಿಕೆಯ ಅನುದಾನದ ಶೇಕಡ ಐದು ಯೋಜನೆ ಅಡಿ ಒಟ್ಟು 26 ಅರ್ಹ ವಿಕಲಚೇತನರಿಗೆ ಯಂತ್ರ ಚಾಲಿತ ತ್ರಿಚಕ್ರವಾಹನ ನೀಡಲಾಗುತ್ತಿದೆ. ಪಾಲಿಕೆಯ ಸದುದ್ದೇಶವನ್ನು ಫಲಾನುಭವಿಗಳು ಸಾಕಾರಗೊಳಿಸಿಕೊಳ್ಳಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಅರ್ಜಿ ಸ್ವೀಕೃತಿ ಹಾಗೂ ಸಹಾಯ ಕೇಂದ್ರವನ್ನು ಶಾಸಕರು,ಮೇಯರ್ ಉಪಮೇಯರ್ ಉದ್ಘಾಟಿಸಿದರು. ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೆಕರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಲಕ್ಷ್ಮಿ ರಾಥೋಡ್, ಮಾಧವಿ ರಾಘೋಚೆ, ಬ್ರಹ್ಮಾನಂದ ಮಿರಜಕರ್ , ಸಮಿತಿ ಸದಸ್ಯರು ಹಾಗೂ ನಗರಸೇವಕರು ವೇದಿಕೆಯಲ್ಲಿದ್ದರು.

ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ ಟಿ. ಸ್ವಾಗತಿಸಿ ವಂದಿಸಿದರು. ಕಂದಾಯ ವಿಭಾಗದ ಉಪ ಆಯುಕ್ತ ಡಾ.ಸಿದ್ದು ಹುಲ್ಲೋಳಿ, ಪಾಲಿಕೆ ಕಾರ್ಯದರ್ಶಿ ಲಕ್ಷ್ಮೀ ನಿಪ್ಪಾಣಿಕರ್, ಪರಿಸರ ವಿಭಾಗದ ಅಭಿಯಂತರ ಹಣಮಂತ ಕಲಾದಗಿ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *