ಬೆಳಗಾವಿಯಲ್ಲಿ ಬಾನೆತ್ತರಕೆ ಹಾರಿದ ಕನ್ನಡದ ಸಂಭ್ರಮ..
ದಾಖಲೆ ಬರೆದ ರಾಜ್ಯೋತ್ಸವ ಸಡಗರದಲ್ಲಿ ಕನ್ನಡಿಗರ ಹೆಮ್ಮೆಯ ಸಂಭ್ರಮ..
ಜಿಲ್ಲಾಡಳಿತ, ಪಾಲಿಕೆ ಹಾಗೂ ನಗರ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ..
ಬೆಳಗಾವಿ : ಶುಕ್ರವಾರ ದಿನಾಂಕ 31/10/2025ರ ರಾತ್ರಿಯಿಂದಲೇ ಶುರುವಾದ ರಾಜ್ಯೋತ್ಸವದ ಹಬ್ಬ ಶನಿವಾರ ರಾತ್ರಿವರೆಗೂ ಮುಂದುವರೆದಿದ್ದು, ಕನ್ನಡಾಂಬೆಯ, ಕನ್ನಡತನದ ಗುಣಗಾನದೊಂದಿಗೆ, ಬೆಳಗಾವಿ ನಗರವನ್ನೆಲ್ಲ ಅರಿಶಿನ ಕುಂಕುಮದಲ್ಲಿ ಸಿಂಗರಿಸಿದಂತೆ, ಕನ್ನಡದ ಕಹಳೆಯನ್ನು ಬಾನೆತ್ತರಕೆ ಸಾಗುವಂತೆ ಮಾಡಿದೆ..

ರಾಜ್ಯ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಲಕ್ಷಾಂತರ ಕನ್ನಡಿಗರು ಆಗಮಿಸಿ ಈ ಸಂಭ್ರಮದಲ್ಲಿ ಭಾಗಿಯಾಗಿದ್ದು, ಕನ್ನಡ ಭಾಷೆ ನೆಲ ಜಲ ಸಂಸ್ಕೃತಿಯ ಕುರಿತಾದ ಘೋಷಣೆ ಹಾಡು ನೃತ್ಯದ ಮೂಲಕ ಕನ್ನಡ ರಾಜ್ಯೋತ್ಸವವನ್ನು ಅತೀ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ..

ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಆಗಮಿಸಿ ಕನ್ನಡದ ತೇರನ್ನು ಎಳೆದಿದ್ದು ನೋಡುವುದೇ ಸಂಭ್ರಮ, ಅನ್ಯಭಾಷಿಯರು ಆಗಮಿಸಿ ರಾಜ್ಯೋತ್ಸವದಲ್ಲಿ ಸಂಭ್ರಮಿಸಿದ್ದು ಮತ್ತೊಂದು ವಿಶೇಷ, ಕನ್ನಡ ಪರ ಸಂಘಟನೆಗಳ ವೇದಿಕೆಗಳು, ವಿವಿಧ ಜನಪದ ಕಲಾ ತಂಡಗಳ ವೈಭವ, ವಿವಿಧ ಭಾಗದ ಕನ್ನಡಿಗರ ಡಿಜೆ ವಾಹನಗಳು, ಕನ್ನಡ ಕಲರವ ಸಾರುವ ವಿಶಿಷ್ಟ ವೇಷಧಾರಿಗಳು, ಕನ್ನಡಾಭಿಮಾನದಿಂದ ವಿಶೇಷವಾಗಿ ನೃತ್ಯ ಮಾಡುವ ಯುವ ಸಮೂಹಗಳು, ವರ್ಣರಂಜಿತ ದೀಪಾಲಂಕಾರ, ಕನ್ನಡದ ಮಹಾಪುರುಷರ ರೂಪಕಗಳು ಹೀಗೆ ಹತ್ತು ಹಲವು ವಿಶೇಷಗಳಿಂದ ಬೆಳಗಾವಿಯ ಕನ್ನಡ ರಾಜ್ಯೋತ್ಸವ ಕಣ್ಮನ ಸೆಳೆಯುವಂತಹ ಸನ್ನಿವೇಶವನ್ನು ಸೃಷ್ಟಿಸಿದ್ದು ಕನ್ನಡಿಗರಿಗೆ ಹಬ್ಬದಂತಿತ್ತು..

ಲಕ್ಷಾಂತರ ಜನ ಸೇರಿರುವ ಇಷ್ಟೊಂದು ಬ್ರಹತ್ ಪ್ರಮಾಣದ ಸಡಗರದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಯುವಂತೆ ವ್ಯವಸ್ಥೆ ಮಾಡಿದ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ನಗರ ಪೊಲೀಸ್ ಇಲಾಖೆಗಳಿಗೆ ಎಲ್ಲರ ಕೃತಜ್ಞತೆ ಇದೆ.

ನಗರವನ್ನು ಮದುವನಗಿತ್ತಿಯಂತೆ ಸಿಂಗಾರ ಮಾಡಿ, ತಾಯಿ ಭುವನೇಶ್ವರಿಯ ಪೂಜಾ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿರುವ ಜಿಲ್ಲಾಡಳಿತ, ಬಂದ ಲಕ್ಷಾಂತರ ಜನತೆಗೆ ಕುಳಿತುಕೊಳ್ಳಲು ಆಸನ, ಕುಡಿಯುವ ನೀರು, ಉತ್ತಮ ಉಪಹಾರದ ವ್ಯವಸ್ಥೆಯನ್ನು ಮಾಡಿದ ಮಹಾನಗರ ಪಾಲಿಕೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅತೀ ಕಾಳಜಿಯಿಂದ ಸೂಕ್ಷ್ಮತೆಯಿಂದ ಲಕ್ಷಾಂತರ ಜನರನ್ನು ನಿಯಂತ್ರಣ ಮಾಡಿದ ನಗರ ಪೊಲೀಸ್ ಸಿಬ್ಬಂದಿಗಳ ಕಾರ್ಯವನ್ನು ಎಲ್ಲರೂ ಮೆಚ್ಚುವಂತಾಗಿದೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..