ಬೆನಕನಹಳ್ಳಿ ಪಟ್ಟಣ ಪಂಚಾಯತಿ ಸಿಬ್ಬಂದಿಯಿಂದ ವ್ಯಾಪಾರಿಗಳಿಗೆ ತೊಂದರೆ..

ಬೆನಕನಹಳ್ಳಿ ಪಟ್ಟಣ ಪಂಚಾಯತಿ ಸಿಬ್ಬಂದಿಯಿಂದ ವ್ಯಾಪಾರಿಗಳಿಗೆ ತೊಂದರೆ..

ತೊಂದರೆ ತಪ್ಪಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ವ್ಯಾಪಾರಿಗಳಿಂದ ಮನವಿ..

ಬೆಳಗಾವಿ : ತಾಲೂಕಿನ ಬೆನಕನಹಳ್ಳಿ ಪಟ್ಟಣ ಪಂಚಾಯತಿಯ ಸಿಬ್ಬಂದಿಯಾದ ಯೋಗೇಶ್ ಎನ್ನುವವರು ಗಣೇಶಪುರದ ಪೈಪಲೈನ್ ರಸ್ತೆಯ ಬೀದಿ ಬದಿ ವ್ಯಾಪಾರಿಗಳ ಹತ್ತಿರ ನಿಯಮಬಾಹಿರವಾಗಿ ಭೂಬಾಡಿಗೆ ವಸೂಲಿ ಮಾಡಿ ತೊಂದರೆ ನೀಡುತ್ತಿದ್ದು, ಈ ಸಮಸ್ಯೆಗೆ ಪರಿಹಾರ ನೀಡಬೇಕೆಂದು, ಬೀದಿ ಬದಿ ವ್ಯಾಪಾರಿಗಳು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಲ್ಲಿಕಾರ್ಜುನ ಕಲಾದಗಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ವ್ಯಾಪಾರಿಗಳ ತಂಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನು ಬೇಟಿ ಆಗಿ, ಮೊದ ಮೊದಲು ಹತ್ತು ರೂಪಾಯಿ ಭೂಬಾಡಿಗೆ ಪಡೆಯುತ್ತಿದ್ದ ಸಿಬ್ಬಂದಿಯು (ಯೋಗೇಶ್) ಈಗ ಪ್ರತಿದಿನ 50 ರೂಪಾಯಿ ಕೇಳುತ್ತಿದ್ದಾರೆ, ನಾವು ಕೇವಲ ಸಂಜೆ ಮಾತ್ರ ಅಲ್ಲಿ ವ್ಯಾಪಾರಕ್ಕೆ ಬರುತ್ತೇವೆ, ಐವತ್ತು ರೂಪಾಯಿ ಎಂದರೆ ನಮಗೆ ತೊಂದರೆ ಆಗುತ್ತದೆ, ಎಷ್ಟೋ ಸಲ ನಮ್ಮ ಸಮಸ್ಯೆ ಹೇಳಿದರೂ ಆತ ಕೇಳುವದಿಲ್ಲ.

ಹಣ ಕೊಡದಿದ್ದರೆ ಪಂಚಾಯತಿಯಿಂದ ನೋಟಿಸ್ ನೀಡುತ್ತೇವೆ, ನಿಮ್ಮ ಅಂಗಡಿಗಳನ್ನು ಖಾಲಿ ಮಾಡಿಸುತ್ತೇವೆ ಎಂದು ಹೆದರಿಸುವರು, ನಾವು ಹಣ ನೀಡಿದರೂ ಕೂಡಾ ಅದಕ್ಕೆ ಮರಳಿ ಆತ ರಶೀದಿಯನ್ನು ನೀಡುವದಿಲ್ಲ, ಸಂಜೆ ಕೇವಲ ನಾಲ್ಕೈದು ಗಂಟೆ ಅಂಗಡಿ ಹಚ್ಚುವ ಬಡ ಬೀದಿ ಬದಿ ವ್ಯಾಪಾರಿಗಳಿಗೆ ಹೀಗೆ ತೊಂದರೆ ಕೊಟ್ಟರೆ ಹೇಗೆ ಎಂದು ಅಧಿಕಾರಿಗಳ ಮುಂದೆ ತಮ್ಮ ಗೋಳು ಹೇಳಿಕೊಂಡಿದ್ದಾರೆ.

ವ್ಯಾಪಾರಿಗಳ ಮನವಿಗೆ ಸ್ಪಂದನೆ ನೀಡಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಲ್ಲಿಕಾರ್ಜುನ್ ಕಲಾದಗಿ ಅವರು, ರಶೀದಿ ನೀಡದಿದ್ದರೆ ಯಾವುದೇ ಕಾರಣಕ್ಕೂ ತಾವು ಭೂ ಬಾಡಿಗೆ ನೀಡಬೇಡಿ, ಇದರ ಬಗ್ಗೆ ಬೆನಕನಹಳ್ಳಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳ ಜೊತೆ ಮಾತನಾಡಿ ತಮ್ಮ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ.

ವರದಿ ಪ್ರಕಾಶ್ ಬಿ ಕೆ…

Leave a Reply

Your email address will not be published. Required fields are marked *