ಬೆಳಗಾವಿಯಲ್ಲಿ “ಸ್ವಾಸ್ಥೆ ಭಾರತ ಶ್ರೇಷ್ಠ ಭಾರತ” ಕ್ಕಾಗಿ ವಾಕಥಾನ ಕಾರ್ಯಕ್ರಮ..
ನಶಾ ಮುಕ್ತ ಅಭಿಯಾನ ಹಾಗೂ ಅಂಗಾಂಗ ದಾನ ಜಾಗ್ರತಿಗಾಗಿ ವಾಕಥಾನ..
ಡಾ, ರವಿ ಪಾಟೀಲ್..
ಬೆಳಗಾವಿ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಯೋಜನೆ ಒಳಪಟ್ಟಿರುವ ಕಾಲೇಜುಗಳ ಸಂಘ, ದಿಶಾಭೋದ ಫೌಂಡೇಶನ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅವರ ಸಹಯೋಗದೊಂದಿಗೆ ಫೆ. 28 ರಂದು ಬೆಳಗ್ಗೆ 7 ಗಂಟೆಗೆ “ಸ್ವಾಸ್ಥ್ಯ ಭಾರತ ಶ್ರೇಷ್ಠ ಭಾರತ”
ನಶಾ ಮುಕ್ತ ಹಾಗೂ ಅಂಗಾಂಗ ದಾನ ಅಭಿಯಾನ ಕುರಿತು ಜಾಥಾ (ವಾಕಥಾನ್) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಚಾರ್ಯ ದೇಸಭೂಷಣ ಆಯುರ್ವೇದಿಕ ಮೆಡಿಕಲ್ ಕಾಲೇಜಿನ ಡೀನ್ ಲಕ್ಷ್ಮಣ ಅರಮನಿ ಅವರು ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಜೊತೆಗೆ ಒಳ್ಳೆಯ ಸ್ವಾಸ್ಥ್ಯ ಕಾಯ್ದು, ಮನೆ, ಊರು, ರಾಜ್ಯ, ದೇಶಕ್ಕೆ ಕೀರ್ತಿ ತರುವಂತಹ ಯುವ ಪೀಳಿಗೆಯನ್ನು ಸೃಷ್ಟಿಸಬೇಕಾದ ಅನಿವಾರ್ಯತೆ ಇದೆ. ಈ ನಡುವೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಮಾದಕ ವಸ್ತುಗಳು ವಿದ್ಯಾರ್ಥಿಗಳನ್ನು ಸೆಳೆಯುತ್ತಿವೆ. ಇದನ್ನು ಹೋಗಲಾಡಿಸಿ, ಯುವಕರಲ್ಲಿ ಜಾಗೃತಿ ಮೂಡಿಸಿ, ಉತ್ತಮ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಈ ವಾಕಥಾನ್ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಡಾ. ರವಿ ಪಾಟೀಲ ಮಾತನಾಡಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್ ಮತ್ತು ಅವರ ತಂಡದ ನೇತೃತ್ವದಲ್ಲಿ ಈಗಾಗಲೇ ರಾಜ್ಯದ ವಿವಿಧ 11 ಜಿಲ್ಲೆಗಳಲ್ಲಿ ನಶಾ ಮುಕ್ತ ಅಭಿಯಾನ ಹಾಗೂ ಮಾನವ ಅಂಗಾಂಗ ದಾನಗಳ ಕುರಿತು ಜಾಗೃತಿ ಮೂಡಿಸಲಾಗಿದೆ. ಅದರಂತೆ ಬೆಳಗಾವಿಯಲ್ಲಿಯೂ ಮಾದಕ ವಸ್ತುಗಳ ಸೇವನೆ ಯಿಂದಾಗುವ ದುಷ್ಪರಿಣಾಮ ಮತ್ತು ಮಾನವ ಅಂಗಾಂಗ ದಾನಗಳ ಪ್ರಯೋಜನಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಾಕಥಾನ್ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಪ್ರತಿ ವರ್ಷ ಸುಮಾರು 5 ಲಕ್ಷ ಜನರಿಗೆ ಮಾನವ ಅಂಗಾಂಗಗಳ ಅಗತ್ಯತೆಯಿದ್ದು, ಸಾರ್ವಜನಿಕರಲ್ಲಿ ಅಂಗಾಂಗ ದಾನಗಳ ಕುರಿತು ಹಿಂಜರಿಕೆ ಇದೆ. ಆದರೆ ನಾವು ಜಾಗೃತಿ ಮೂಡಿಸುವ ಮೂಲಕ ಇದನ್ನು ಹೋಗಲಾಡಿಸಬೇಕು. ಒಂದು ದೇಹ ದಾನ ಮಾಡಿದರೆ ಏಳು ಜೀವ ಉಳಿಸಬಹುದು. ಸುಮಾರು 50ರಿಂದ 60 ಜನರು ಅಂಗಗಳ ಲಾಭ ಪಡೆಯುತ್ತಾರೆ. ಸಾರ್ವಜನಿಕರು ಸ್ವಇಚ್ಛೆಯಿಂದ ದೇಹ ದಾನ ಮಾಡಲು ಮುಂದೆ ಬರಬೇಕು ಎಂದರು.
ಅಂದು ಬೆಳಗ್ಗೆ ಕಾರ್ಯಕ್ರಮದ ಉದ್ಘಾಟಕರಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಆಗಮಿಸಲಿದ್ದಾರೆ. ಶಾಸಕರಾದ ಆಸೀಫ್ ಸೇಠ್, ಅಭಯ್ ಪಾಟೀಲ ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ವಾಕಥಾನ್ ನಗರದ ಜಿಲ್ಲಾ ಕ್ರೀಡಾಂಗಣದಿಂದ ಸರದಾರ ಮೈದಾನದವರೆಗೂ ನಡೆಯಲಿದೆ. ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಮ್ಸ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ ನಾಮದೇವ ಮಾಳಗಿ, ಡಾ ಲಕ್ಷ್ಮಣ ಅರಮನಿ, ಡಾ ಸಚಿನ ಪಟ್ಟಣಶೆಟ್ಟಿ, ಡಾ. ವಿನಯ್ ಮೋಹನ್, ಡಾ. ಅಡಿವೇಶ ಎ. ಸೇರಿದಂತೆ ಇತರರು ಉಪಸ್ಥಿತರಿದ್ದರು.