ಕನ್ನಡ ನಾಡು ನುಡಿಯ ವಿರೋಧಿ ನಿಲುವನ್ನು ರಾಜ್ಯ ಸರ್ಕಾರಕ್ಕೆ ವರದಿ ಮಾಡಿ..

ಕನ್ನಡ ನಾಡು ನುಡಿಯ ವಿರೋಧಿ ನಿಲುವನ್ನು ರಾಜ್ಯ ಸರ್ಕಾರಕ್ಕೆ ವರದಿ ಮಾಡಿ..

ಗಡಿನಾಡು ಕನ್ನಡಿಗರ ಸೇನೆಯಿಂದ ಪ್ರಾದೇಶಿಕ ಆಯುಕ್ತರಿಗೆ ಮನವಿ..

ಬೆಳಗಾವಿ : ಕರ್ನಾಟಕದ ಪರವಾದ ಗೊತ್ತುವಳಿಯನ್ನು ಅಂಗೀಕರಿಸಲು ನಿರಾಕರಿಸುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯ ಕನ್ನಡ ನಾಡು ನುಡಿ ಗಡಿಯ ಹಿತಾಸಕ್ತಿಯನ್ನು ವಿರೋಧ ಮಾಡುತ್ತಿರುವ ನಿಲುವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ವರದಿ ಕಳಿಸಿ ಎಂದು ಗಡಿನಾಡು ಕನ್ನಡಿಗರ ಸೇನೆಯ ಸದಸ್ಯರು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ..

ಮಂಗಳವಾರ ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿ ಮನವಿ ನೀಡಿದ ಸಂಘಟನೆಯ ಸದಸ್ಯರು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ಗೊತ್ತುವಳಿಯನ್ನು ಅಂಗೀಕಾರ ಮಾಡಬೇಕೆಂದು ಬೆಳಗಾವಿಯ ಸುಮಾರು ಇಪ್ಪತ್ತು ಸಂಘಟನೆಗಳು ಕಳೆದ ಮಾರ್ಚಿನಿಂದ ಹೋರಾಟ ನಡೆಸಿವೆ. ಆದರೂ ಪಾಲಿಕೆ ಇನ್ನೂ ನಿರ್ಣಯ ಅಂಗೀಕರಿಸಲು ಮನಸ್ಸು ಮಾಡುತ್ತಿಲ್ಲ.

ಈ ಹಿಂದೆ 2005 ಅಕ್ಟೋಬರ್ 27ರಂದು ಇದೇ ನಮ್ಮ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹಾರಾಷ್ಟ್ರ ಪರವಾದ ಗೊತ್ತುವಳಿಯನ್ನು ಅಂಗೀಕರಿಸಲಾಗಿದೆ, ಈಗ ಸುಪ್ರೀಂ ಕೋರ್ಟಿನ ಹೊಸ್ತಿಲಿನಲ್ಲಿ ಇರುವ ಗಡಿವಿವಾದ ಪ್ರಕರಣದಲ್ಲಿ ಈ ಮಹಾರಾಷ್ಟ್ರ ಪರವಾದ ಗೊತ್ತುವಳಿಯನ್ನು ಪೂರಕ ದಾಖಲೆಯಾಗಿ ಅವರು ಬಳಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯನ್ನು ಈಗ ಅಂಗೀಕರಿಸುವದು ತುಂಬಾ ಅವಶ್ಯಕವಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಪಾಲಿಕೆಯಲ್ಲಿ 35 ಸದಸ್ಯರನ್ನು ಹೊಂದಿ ಬಹುಮತ ಪಡೆದಿರುವ ಬಿಜೆಪಿ ಪಕ್ಷ ಇನ್ನೂವರೆಗೂ ಕನ್ನಡಪರ ನಿರ್ಣಯವನ್ನು ಅಂಗೀಕರಿಸಿಲ್ಲ, ಇದು ಕನ್ನಡ ನಾಡು ನುಡಿಗೆ ಮಾಡುತ್ತಿರುವ ದ್ರೋಹ ಆಗಿದೆ, ಇದನ್ನು ತಾವು ಗಂಭೀರವಾಗಿ ಪರಿಗಣಿಸಬೇಕು ಜೊತೆಗೆ ಪಾಲಿಕೆಯ ನಡಾವಳಿಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಬೇಕೆಂದು ಮನವಿ ಮಾಡಿಕೊಂಡಿದ್ದಾರೆ..

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *