ಪಾಲಿಕೆ – ಅಂಚೆ ಇಲಾಖೆ ಒಪ್ಪಂದ..

ಪಾಲಿಕೆ – ಅಂಚೆ ಇಲಾಖೆ ಒಪ್ಪಂದ..

ಇನ್ನು ಮುಂದೆ ಜನನ ಮರಣ ಪ್ರಮಾಣ ಪತ್ರ ಮನೆ ಬಾಗಿಲಿಗೆ..

ಬೆಳಗಾವಿ : ಸಾರ್ವಜನಿಕರು ಮಹಾನಗರ ಪಾಲಿಕೆಯಿಂದ ಪಡೆದುಕೊಳ್ಳುವ ಜನನ ಮರಣ ಪ್ರಮಾಣ ಪತ್ರಗಳನ್ನು ಇನ್ನು ಮುಂದೆ ಅಂಚೆ ಇಲಾಖೆ ಮೂಲಕವೂ ತಮ್ಮ ಮನೆ ಬಾಗಿಲಲ್ಲೇ ಪಡೆದುಕೊಳ್ಳಬಹುದು.

ಈ ಕುರಿತು ಶುಕ್ರವಾರ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಹಾಗೂ ಅಂಚೆ ಇಲಾಖೆಯ ಬೆಳಗಾವಿ ವಿಭಾಗದ ಹಿರಿಯ ಅಧೀಕ್ಷಕಿ ಆರುಷಿ ಶರ್ಮಾ ಅವರು ಪಾಲಿಕೆ ಹಾಗೂ ಅಂಚೆ ಇಲಾಖೆ ಮದ್ಯದ ಒಪ್ಪಿಗೆ ಪತ್ರಕ್ಕೆ
ಸಹಿ ಹಾಕುವ ಮೂಲಕ ಪರಸ್ಪರ (ಎಂಓಯು) ಒಡಂಬಡಿಕೆ ಮಾಡಿಕೊಳ್ಳಲಾಯಿತು.

ನಂತರ ಮಾತನಾಡಿದ ಪಾಲಿಕೆ ಆಯುಕ್ತ ಕಾರ್ತಿಕ್ ಎಂ ಅವರು, ಸಾರ್ವಜನಿಕರು ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆಯಲು ಪಾಲಿಕೆಗೆ ಸಲ್ಲಿಸುವ ಅರ್ಜಿಯೊಂದಿಗೆ ಅಂಚೆ ಮೂಲಕ ಪ್ರಮಾಣ ಪತ್ರ ಪಡೆಯುವುದಕ್ಕಾಗಿ
ವಿಳಾಸ ಸಹಿತ ಒಪ್ಪಿಗೆ ಪತ್ರ ಸಲ್ಲಿಸಿದಾಗ ಪಾಲಿಕೆಯ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣಾ ವಿಭಾಗವು ತಮ್ಮ ಮನೆಗೆ ಅಂಚೆ ಮೂಲಕ ಪ್ರಮಾಣ ಪತ್ರ ಕಳಿಸಲಿದ್ದು, ಅಂಚೆ ಶುಲ್ಕ ಪಾವತಿಸಿ ತಮ್ಮ ಮನೆ ಬಾಗಿಲಲ್ಲೇ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು.

ಇದರಿಂದ ಸಮಯ ಮತ್ತು ವೆಚ್ಚ ಉಳಿತಾಯವಾಗಲಿದ್ದು,
ಪಾಲಿಕೆ ಮತ್ತು ಅಂಚೆ ಇಲಾಖೆಯ ಈ ಉತ್ತಮ ವ್ಯವಸ್ಥೆಯ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು
ಆಯುಕ್ತರು ಕೋರಿದರು.

ಈ ಸಂದರ್ಭದಲ್ಲಿ
ಅಂಚೆ ಇಲಾಖೆಯ ಬೆಳಗಾವಿ ವಿಭಾಗದ ಹಿರಿಯ ಅಧೀಕ್ಷಕಿ ಆರುಷಿ ಶರ್ಮಾ, ಪಾಲಿಕೆಯ ಪರಿಸರ ವಿಭಾಗದ ಅಭಿಯಂತರ ಹನಮಂತ ಕಲಾದಗಿ ಜನನ ಮರಣ ನೋಂದಣಾಧಿಕಾರಿ
ಅಶೋಕಕುಮಾರ ಸಜ್ಜನ್,
ಅಂಚೆ ಇಲಾಖೆ ಅಧಿಕಾರಿಗಳಾದ ಮಾರುತಿ ದೊಡಮನಿ, ಅನಂತಶಯನ ಇತರರು ಉಪಸ್ಥಿತರಿದ್ದರು.