ನಿಯಮಬಾಹಿರ ಪಿಐಡಿ ಪ್ರಕರಣದಲ್ಲಿ ಶುರುವಾದ ಶಿಸ್ತುಕ್ರಮ..
ಪಾಲಿಕೆ ಆಯುಕ್ತರಿಂದ ನಾಲ್ವರು ಸಿಬ್ಬಂದಿಗಳ ವೇತನ ಬಡ್ತಿಗೆ ತಡೆ..
ಇನ್ನೂಳಿದ ನಿಯಮಬಾಹಿರ ಪಿಐಡಿಗಳ ಮೇಲೆ ಕ್ರಮ ಯಾವಾಗ??
ಬೆಳಗಾವಿ : ಮಹಾನಗರ ಪಾಲಿಕೆಯ ದಕ್ಷಿಣ ಕಂದಾಯ ವಲಯದ ವಾರ್ಡ ಸಂಖ್ಯೆ 9 ಹಾಗೂ 10ರಲ್ಲಿ ನಡೆದಿರುವ 31 ಅಕ್ರಮ ಪಿಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸಿಬ್ಬಂದಿಗಳ ವಿರುದ್ಧ ಮೊದಲ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ ಎಂ. ಅವರು ಈ ಪ್ರಕರಣಕ್ಕೆ ಸಂಬಂಧಪಟ್ಟ ನಾಲ್ವರು ಅಧಿಕಾರಿಗಳ ವೇತನ ಬಡ್ತಿಯನ್ನು ತಡೆಹಿಡಿದಿದ್ದು, ಮುಂದಿನ ಕ್ರಮಕ್ಕಾಗಿ ಕಂದಾಯ ವಿಭಾಗದ ಉಪ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಮಹಾನಗರ ಪಾಲಿಕೆಯ ದಕ್ಷಿಣ ವಿಭಾಗದ ಕಚೇರಿಯಲ್ಲಿದ್ದ ವಲಯ ಆಯುಕ್ತ, ಕಂದಾಯ ಅಧಿಕಾರಿ, ಕಂದಾಯ ನೀರಿಕ್ಷಕ ಹಾಗೂ ಕರ ವಸೂಲಿಗಾರ ಇವರು ಅಕ್ರಮ ಪಿಐಡಿ ನೀಡಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ತನಿಖಾ ಸಮಿತಿಯನ್ನು ನೇಮಿಸಿ, ಮಹಾನಗರ ಪಾಲಿಕೆ ಆಯುಕ್ತರಿಗೆ ವರದಿ ನೀಡುವಂತೆ ಸೂಚಿಸಲಾಗಿತ್ತು. ನಂತರ ತನಿಖಾ ತಂಡದಿಂದ ಸಮಗ್ರವಾಗಿ ತನಿಖೆ ನಡೆಸಿ ವರದಿ ಸಲ್ಲಿಸಲಾಗಿತ್ತು.

ತನಿಖೆಯ ವೇಳೆ ಈ ನಾಲ್ಕು ಸಿಬ್ಬಂದಿಗಳು ಅಕ್ರಮವಾಗಿ ಪಿಐಡಿ ನೀಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಸಾಮಾನ್ಯ ಸಭೆಯಲ್ಲಿಯೂ ಸಾಕಷ್ಟು ಚರ್ಚೆ ನಡೆದಿತ್ತು.
ವರದಿ ಬಂದು, ತಪ್ಪು ಸಾಬೀತಾಗಿದ್ದರು ಬಹಳ ದಿನಗಳ ವರೆಗೆ ಆ ನಾಲ್ವರು ಸಿಬ್ಬಂದಿಗಳ ವಿರುದ್ಧ ಯಾವುದೇ ಕ್ರಮ ಆಗಿರಲಿಲ್ಲ, ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಬನಶಂಕರಿ ಅವರು ಆಯುಕ್ತರಿಗೆ ಪತ್ರ ಬರೆದು, ನಾಲ್ವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಅದರಂತೆ ಬುಧವಾರ (ದಿ. 9) ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ ಎಂ. ಅವರು ಸಂಬಂಧಪಟ್ಟ ನಾಲ್ವರು ಸಿಬ್ಬಂದಿಗಳ ವೇತನ ಬಡ್ತಿಯನ್ನು ತಡೆಹಿಡಿಯುವ ಆದೇಶ ನೀಡಿದ್ದಾರೆ. ಇದರಿಂದ ಮೊದಲ ಹಂತದಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಆದರೆ ಇಷ್ಟೇ ಕ್ರಮ ಕೈಗೊಂಡರೆ ಸಾಕಾಗುವುದಿಲ್ಲ. ಈ ಪ್ರಕರಣದಲ್ಲಿ ನಿಯಮಾನುಸಾರ ಇನ್ನಷ್ಟು ಕ್ರಮ ಕೈಗೊಳ್ಳಬೇಕು, ಇದೇ ರೀತಿ ಇನ್ನೂ ಹತ್ತು ಹಲವಾರು ಅಕ್ರಮ ಪಿಐಡಿ ಹಾಗೂ ಬಿ ಖಾತಾಗಳು ಸಿದ್ದವಾಗಿದ್ದು ಅವುಗಳ ಮೇಲೇಯೂ ಆದಷ್ಟು ಬೇಗ ಕ್ರಮ ಆಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಬನಶಂಕರಿ ಒತ್ತಾಯಿಸಿದ್ದಾರೆ.