ಪರಿಷತ್ ಸಭೆಯ ಠರಾವುಗಳಿಗೆ ಸಿಗದ ಮನ್ನಣೆ..

ಪರಿಷತ್ ಸಭೆಯ ಠರಾವುಗಳಿಗೆ ಸಿಗದ ಮನ್ನಣೆ..

ನಗರಸೇವಕ ಸಂದೀಪ ಜೀರಗ್ಯಾಳ ಅಸಮಾಧಾನ..

ಬೆಳಗಾವಿ : ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಕೈಗೊಳ್ಳುವ ಠರಾವುಗಳಿಗೂ ಮನ್ನಣೆ ಸಿಗದೇ ಇರುವುದಕ್ಕೆ ಅಸಮಾಧಾನ ಹೊರಹಾಕಿದ ಬಿಜೆಪಿ ನಗರಸೇವಕ ಸಂದೀಪ ಜೀರಗ್ಯಾಳ, ಇಲ್ಲಿಯವರೆಗಿನ ಠರಾವುಗಳ ಕಥೆ ಏನಾಗಿದೆ ಎಂದು ಗುಡುಗಿದರು.
ಬುಧವಾರ ಪಾಲಿಕೆ ಸಭೆ ಆರಂಭವಾಗುತ್ತಿದ್ದಂತೆ ಈ ಕುರಿತು ಪ್ರಸ್ತಾಪಿಸಿದ ಅವರು, ಪರಿಷತ್ ಸಭೆಯಲ್ಲಿ ಠರಾವು ಪಾಸು ಮಾಡಿ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಕಾರ್ತಿಕ ಎಂ ಅವರು, ಈಗಾಗಲೇ ಹದಿನೆಂಟು ಪ್ರಕರಣಗಳಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅವುಗಳಲ್ಲಿ ಇತ್ತೀಚಿನ 31 ಹಾಗೂ 66 ನಿಯಮಬಾಹಿರ ಪಿಐಡಿಗಳ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ಆದರೆ, ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂದೀಪ ಜೀರಗ್ಯಾಳ, ಈ ಪೈಕಿ ಎಷ್ಟು ಪ್ರಕರಣದಲ್ಲಿ ಕ್ರಮ ಆಗಿದೆ ಎಂದರೆ ಆಯುಕ್ತರಿಂದ ಉತ್ತರ ಸಿಗಲಿಲ್ಲ.
ಈ ಸಂದರ್ಭದಲ್ಲಿ ಸಂದೀಪ ಜೀರಗ್ಯಾಳ ಅವರ ಮಾತಿಗೆ ದನಿಗೂಡಿಸಿದ‌ ನಗರ ಸೇವಕರಾದ ರವಿ ಧೋತ್ರೆ ಹಾಗೂ ಶಾಹೀದ್ ಪಠಾಣ್, ಠರಾವುಗಳಿಗೆ ಬೆಲೆ ಸಿಗದಿದ್ದರೆ ಯಾಕೆ ಠರಾವು ಪಾಸ್ ಮಾಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಆಗದಿದ್ದರೆ ಠರಾವುಗಳನ್ನು ಏಕೆ ಕೈಗೊಳ್ಳಬೇಕು ಎಂದು ಖಾರವಾಗಿ ಪ್ರಶ್ನಿಸಿದರು.

ಈ‌ ಸಂದರ್ಭದಲ್ಲಿ ರೂಲಿಂಗ್ ಕೊಟ್ಟ ಮಹಾಪೌರರಾದ ಪ್ರೀತಿ ಕಾಮಕರ, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಮತ್ತೆ ಸರ್ಕಾರಕ್ಕೆ ಪತ್ರ ಬರೆಯಲು ಸೂಚನೆ ನೀಡಿದರು.

ಒಟ್ಟಾರೆ, ಮಹಾಜನ್ ವರದಿ ಅನುಷ್ಠಾನದ ನಿರ್ಣಯಕ್ಕೆ ಸರ್ವಾನುಮತದ ಬೆಂಬಲ ವ್ಯಕ್ತವಾದರೂ, ಸಭಾಂಗಣದ ಮೂಲಸೌಕರ್ಯ ಸಮಸ್ಯೆ, ‘ವಂದೇ ಮಾತರಂ’ ಗಾಯನ ಹಾಗೂ ಸದಸ್ಯರು–ಅಧಿಕಾರಿಗಳ ನಡುವಿನ ವಾಗ್ವಾದದಿಂದಾಗಿ ಪಾಲಿಕೆ ಸಾಮಾನ್ಯ ಸಭೆ ಹಲವು ಗೊಂದಲ ಗಲಾಟೆಗಳಿಗೆ ಸಾಕ್ಷಿಯಾಗಿದ್ದು ವಿಶೇಷ.

Leave a Reply

Your email address will not be published. Required fields are marked *