ಬೆಳಗಾವಿಯಲ್ಲಿ ಭಾಷೆ ಮತ್ತು ಸಂಸ್ಕೃತಿಗಾಗಿ 99ನೇ ನಾಡಹಬ್ಬ ಉತ್ಸವ..
ಐದು ದಿನ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು..
ಬೆಳಗಾವಿ : ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ 99ನೇ ನಾಡಹಬ್ಬ ಉತ್ಸವವನ್ನು ಅ. 11ರಿಂದ 15ರವರೆಗೆ ನಗರದ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಡಾ. ಎಚ್.ಬಿ. ರಾಜಶೇಖರ ತಿಳಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1927ರಿಂದ ಬೆಳಗಾವಿಯಲ್ಲಿ ನಾಡಹಬ್ಬ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಐದು ದಿನಗಳ ಕಾಲ ವಿವಿಧ ವಿಷಯಗಳ ಕುರಿತು ಚಿಂತನಗೋಷ್ಠಿ, ಕವಿಗೋಷ್ಠಿ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ 6 ಗಂಟೆಗೆ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದರು.
ಅ. 11ರಂದು ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಉತ್ಸವ ಉದ್ಘಾಟಿಸಲಿದ್ದು, ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದ ಜಗದೀಶ ಶೆಟ್ಟರ್ ಅಧ್ಯಕ್ಷತೆ ವಹಿಸಲಿದ್ದು, ಡಾ. ಬಸವರಾಜ ಜಗಜಂಪಿ ವಂದೇ ಮಾತರಂ ವಿಷಯವಾಗಿ ಚಿಂತನೆ ಮಂಡಿಸುವರು.
ಅ. 12ರಂದು ವಿಶ್ವದ ಭವಿಷ್ಯಕ್ಕೆ ಅವಕಾಶಗಳು ಮತ್ತು ಎಚ್ಚರಿಕೆಗಳು ವಿಷಯದ ಕುರಿತು ಕಾರ್ಯಕ್ರಮ ನಡೆಯಲಿದೆ. ಆರ್.ಎಲ್. ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಪಿ.ಜಿ. ಕೆಂಪಣ್ಣವರ ಪ್ರಾಸ್ತಾವಿಕವಾಗಿ ಮಾತನಾಡುವರು. ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಡಾ. ಅರುಣ ಹೊಸಮಠ ಅಧ್ಯಕ್ಷತೆ ವಹಿಸುವರು.
ಅ. 13ರಂದು ಸಬಲೀಕರಣದ ಹಾದಿಯಲ್ಲಿ ಮಹಿಳಾ ಮೀಸಲಾತಿ’ ವಿಷಯದ ಕುರಿತು ಚಿಂತನಗೋಷ್ಠಿ ನಡೆಯಲಿದೆ. ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರೊ. ಸಿ.ಬಿ. ಅರಿಕೇರಿ ವಿಷಯ ಮಂಡಿಸಲಿದ್ದು, ಡಾ. ಗುರುದೇವಿ ಹುಲೆಪ್ಪನವರ ಅಧ್ಯಕ್ಷತೆ ವಹಿಸುವರು.
ಅ. 14ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಭಾಷಾ ಸಂವರ್ಧನೆ’ ವಿಷಯದ ಕುರಿತು ಕಾರ್ಯಕ್ರಮ ನಡೆಯಲಿದೆ. ಕಿತ್ತೂರು ಕಲ್ಮಠದ ಮಡಿವಾಳೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಆರ್ಸಿಯು ಕುಲಪತಿ ಡಾ. ಸಿ.ಎಂ. ತ್ಯಾಗರಾಜ ಅಧ್ಯಕ್ಷತೆ ವಹಿಸಲಿದ್ದು, ಕುಲಸಚಿವ ಸಂತೋಷ ಕಾಮಗೌಡ ಅತಿಥಿಯಾಗಿ ಪಾಲ್ಗೊಳ್ಳುವರು.
ಅ. 15ರಂದು ಸಮಾರೋಪಕ್ಕೆ ಖ್ಯಾತ ಕವಿ ಡಾ. ಬಸು ಬೇವಿನಗಿಡದ ಕವಿಗೋಷ್ಠಿ ಉದ್ಘಾಟಿಸುವರು. ಡಾ. ಸರಜು ಕಾಟ್ಕರ್ ಅಧ್ಯಕ್ಷತೆ ವಹಿಸುವರು. ಸಮಾರೋಪ ಸಮಾರಂಭದಲ್ಲಿ ನಿಡಸೋಸಿ ಮಠದ ಉತ್ತರಾಧಿಕಾರಿ ಶ್ರೀ ನಿಜಲಿಂಗೇಶ್ವರ ಸಾನ್ನಿಧ್ಯ ವಹಿಸುವರು. ಡಾ. ಎಚ್.ಬಿ. ರಾಜಶೇಖರ ಅಧ್ಯಕ್ಷತೆ ವಹಿಸಲಿದ್ದು, ಡಾ. ಸಿ.ಕೆ. ಜೋರಾಪುರ ಪ್ರಾಸ್ತಾವಿಕವಾಗಿ ಮಾತನಾಡುವರು.
ಐದು ದಿನಗಳ ಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನೃತ್ಯ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಲಾ ಪ್ರದರ್ಶನಗಳು ನಡೆಯಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಡಾ. ಸಿ.ಕೆ. ಜೋರಾಪುರ, ಸೋಮಲಿಂಗ ಮಾವಿನಕಟ್ಟಿ, ಎಚ್.ಐ. ತಿಮ್ಮಾಪೂರ, ಆರ್.ಪಿ. ಪಾಟೀಲ, ಅನ್ನಪೂರ್ಣ ಹಿರೇಮಠ, ಜ್ಯೋತಿ ಬದಾಮಿ, ವಿಜಯಾ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.