ದರ ಘೋಷಿಸಿ, ಪಾದಯಾತ್ರೆಯಿಂದಲೇ ಮನೆಗೆ ಮರಳುತ್ತೇವೆ..
ಜೋಶಿಗೆ ಚೂನಪ್ಪ ಪೂಜಾರಿ ಆಹ್ವಾನ…
ಬೆಳಗಾವಿ : ನಮಗೂ ಮನೆಗೆ ಹೋಗುವ ಆತುರವಿದೆ. ಹಬ್ಬ ಆಚರಿಸಬೇಕಿದೆ. ಆದರೆ, ಬೆಳೆದ ಕಬ್ಬಿಗೆ ಸೂಕ್ತ ದರ ಸಿಗದೆ ಬರಿಗೈಯಲ್ಲಿ ಮನೆಗೆ ಹಿಂದಿರುಗುವುದು ಹೇಗೆ? ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ಹೋರಾಟದ ಸ್ಥಳಕ್ಕೆ ಬಂದು ಕಬ್ಬಿನ ದರ ಘೋಷಿಸಿ, ಖರೀದಿಯ ಜವಾಬ್ದಾರಿ ವಹಿಸಿಕೊಳ್ಳಲಿ. ಬೇಡಿಕೆ ಈಡೇರಿಸಿದರೆ ಸಾಮೂಹಿಕವಾಗಿ ಹೋರಾಟ ಹಿಂತೆಗೆದುಕೊಳ್ಳುತ್ತೇವೆ ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಹೇಳಿದರು.
ಕಬ್ಬು ಬೆಳೆಗಾರರ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಭಾನುವಾರ ಕಿತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದೊಂದಿಗೆ ಚರ್ಚೆಗೆ ರೈತರು ಸಿದ್ಧರಿದ್ದಾರೆ. ಆದರೆ, ಸರ್ಕಾರದ ಪ್ರಸ್ತಾವನೆಗಳನ್ನು ಸಾರ್ವಜನಿಕವಾಗಿ ರೈತರ ಮುಂದಿಡಬೇಕು. ಮುಂದಿನ ಯಾವುದೇ ತೀರ್ಮಾನವೂ ರೈತರ ವಿಶ್ವಾಸ ಪಡೆದೇ ಆಗಬೇಕು ಎಂದು ಸ್ಪಷ್ಟಪಡಿಸಿದರು.
ಪ್ರಲ್ಹಾದ ಜೋಶಿ ಅವರು ಹೋರಾಟದ ಸ್ಥಳಕ್ಕೆ ಬಂದು ದರ ಘೋಷಿಸುತ್ತಾರೆ ಎಂಬ ನಿರೀಕ್ಷೆಯಿಂದ ಕಾಯುತ್ತಿದ್ದೇವೆ. ಶಾಸಕರು, ಅಧಿಕಾರಿಗಳು ಹಾಗೂ ರೈತ ನಿಯೋಗದ ಮೂಲಕ ಚರ್ಚೆ ನಡೆಸುವ ಸಂದೇಶಗಳು ಬರುತ್ತಿವೆ. ಆದರೆ, ಇದು ಈಗ ಕೇವಲ ಸಂಘಟನೆಯ ಹೋರಾಟವಾಗಿ ಉಳಿದಿಲ್ಲ. ಜನಾಂದೋಲನವಾಗಿ ರೂಪುಗೊಂಡಿದೆ. ಹೀಗಾಗಿ ರೈತರ ನಿರೀಕ್ಷೆಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ನೇರವಾಗಿ ಚರ್ಚಿಸುವಂತೆ ಪೂಜಾರಿ ಆಹ್ವಾನ ನೀಡಿದರು.
ಜೋಶಿ ಅವರು ಬರುವುದಾದರೆ ಸಭೆಯನ್ನು ಸಂಪೂರ್ಣ ಶಾಂತಿಯುತವಾಗಿ ನಡೆಸುವ ಜವಾಬ್ದಾರಿ ನಮ್ಮದು. ಯಾವುದೇ ಸಣ್ಣ ಗಲಾಟೆಯೂ ನಡೆಯದಂತೆ ರೈತರನ್ನು ಶಿಸ್ತಿನಿಂದ ಕೂಡಿಸುತ್ತೇವೆ. ತಾವು ಬಂದು ರೈತರ ಸಮಸ್ಯೆ ಆಲಿಸಿ, ಪರಿಹಾರದ ನಿರ್ಧಾರ ಪ್ರಕಟಿಸಬೇಕು. ಕಬ್ಬಿನ ದರ ನಿಗದಿ ಹಾಗೂ ಖರೀದಿಯ ಜವಾಬ್ದಾರಿ ವಹಿಸಿಕೊಂಡರೆ ಹೋರಾಟ ಹಿಂತೆಗೆದುಕೊಳ್ಳಲು ನಾವು ಸಿದ್ಧ ಎಂದು ಹೇಳಿದರು.
ರಾಜ್ಯ ಸರ್ಕಾರ ಕೂಡಲೇ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆಯಬೇಕು. ರೈತರ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ರಾಜ್ಯದ ಎಲ್ಲ ಸಂಸದರೂ ರೈತರ ಪರವಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಕಬ್ಬಿನ ದರದ ಅನಿಶ್ಚಿತತೆ ಜತೆಗೆ ಕಾರ್ಖಾನೆಗಳಲ್ಲಿ ನುರಿಸುವ ಕಾರ್ಯ ಆರಂಭಿಸಲು ವಿಳಂಬವಾಗುತ್ತಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಪೂಜಾರಿ ಹೇಳಿದರು.
ಮಳೆ ಕೊರತೆ, ವಿದ್ಯುತ್ ಸಮಸ್ಯೆ ಹಾಗೂ ಕೃಷಿ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ನಡುವೆಯೇ ರೈತರು ಕಬ್ಬು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಒಂದು ಟನ್ ಕಬ್ಬು ಬೆಳೆಯಲು ಸುಮಾರು ₹5,500 ವೆಚ್ಚವಾಗುತ್ತಿದೆ. ಕೃಷಿ ಪರಿಕರಗಳ ಬೆಲೆ ಗಗನಕ್ಕೇರಿದೆ. ಹೀಗಿರುವಾಗ ವರ್ಷಗಟ್ಟಲೆ ಪರಿಹಾರಕ್ಕಾಗಿ ಕಾಯುತ್ತ ಕುಳಿತುಕೊಳ್ಳಲು ಸಾಧ್ಯವಿಲ್ಲ
ಎಂದು ಹೇಳಿದರು.
ಹಬ್ಬದ ದಿನಗಳು ಸಮೀಪಿಸುತ್ತಿದ್ದರೂ ರೈತರು ಮನೆ-ಮಠ ಬಿಟ್ಟು ಹೋರಾಟದಲ್ಲಿ ಉಳಿಯಬೇಕಾಗಿದೆ. ಸರ್ಕಾರ ತ್ವರಿತವಾಗಿ ನಿರ್ಧಾರ ಕೈಗೊಂಡರೆ ರೈತರೂ ನೆಮ್ಮದಿಯಿಂದ ಹಬ್ಬ ಆಚರಿಸಿ ಮನೆಗೆ ಮರಳಬಹುದು ಎಂದರು.
ಅ.22ಕ್ಕೆ ಬೃಹತ್ ಸಮಾವೇಶ:
ಕಿತ್ತೂರಿನಿಂದ ಪಾದಯಾತ್ರೆ ಮುಂದುವರಿಯಲಿದೆ. ಮಾರ್ಗಮಧ್ಯೆ ಅಧಿಕಾರಿಗಳು ಮಂಡಿಸುವ ಸರ್ಕಾರದ ಪ್ರಸ್ತಾವನೆಗಳನ್ನು ರೈತರ ಸಮ್ಮುಖದಲ್ಲೇ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಪರಿಹಾರ ದೊರೆಯದಿದ್ದರೆ ಅಕ್ಟೋಬರ್ 22ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ರೈತ ಸಮಾವೇಶ ನಡೆಸಲಾಗುವುದು ಎಂದು ಪೂಜೇರಿ ಎಚ್ಚರಿಸಿದರು.
ಮುಂದಿನ ಹೆಜ್ಜೆಯನ್ನು ರೈತರೇ ಸಾಮೂಹಿಕವಾಗಿ ನಿರ್ಧರಿಸುತ್ತಾರೆ. ಸರ್ಕಾರ ಈಗಲಾದರೂ ಸ್ಪಷ್ಟ ನಿರ್ಧಾರದೊಂದಿಗೆ ಮುಂದೆ ಬರಬೇಕು. ರೈತರು ಬೆಳೆದ ಕಬ್ಬಿಗೆ ನ್ಯಾಯಯುತ ದರ ಘೋಷಿಸಿ, ಖರೀದಿಯ ಭರವಸೆ ನೀಡಿದರೆ ಮಾತ್ರ ಹೋರಾಟಕ್ಕೆ ಅಂತ್ಯ ಹಾಡಲು ಸಾಧ್ಯ ಎಂದು ಹೇಳಿದರು.