ಕಸಾಪ ಇಡೀ ಕರ್ನಾಟಕದ ಧ್ವನಿ.. ಡಾ. ಸರಜೂ ಕಾಟಕರ..

ಕಸಾಪ ಇಡೀ ಕರ್ನಾಟಕದ ಧ್ವನಿ.. ಡಾ. ಸರಜೂ ಕಾಟಕರ..

ಬೆಳಗಾವಿ : ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸಾರ್ವಭೌಮ ಸಂಸ್ಥೆಯಾಗಿದ್ದು, ಇಡೀ ಕರ್ನಾಟಕದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹಿರಿಯ ಸಾಹಿತಿ ಡಾ. ಸರಜೂ ಕಾಟಕರ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪರಿಷತ್ತಿನ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಅಧ್ಯಕ್ಷತೆ ವಹಿಸಿದ್ದರು. ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷಗಳನ್ನು ಪೂರೈಸಿರುವುದು ಮಹತ್ವದ ಸಾಧನೆ. ಪರಿಷತ್ತು ಮಾತನಾಡಿದರೆ ಇಡೀ ಕರ್ನಾಟಕ ಹಾಗೂ ಕನ್ನಡಿಗರು ಮಾತನಾಡಿದಂತೆ. ಹಿಂದೆ ಜಿ. ನಾರಾಯಣ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೇವಲ ಒಂದು ರೂಪಾಯಿ ಸದಸ್ಯತ್ವದ ಮೂಲಕ ಐದು ಲಕ್ಷ ಸದಸ್ಯರನ್ನು ಸೇರ್ಪಡೆಗೊಳಿಸುವ ಮಹತ್ವಾಕಾಂಕ್ಷೆಯ ಅಭಿಯಾನ ನಡೆಸಲಾಗಿತ್ತು ಎಂದು ಪರಿಷತ್ತಿನ ಇತಿಹಾಸವನ್ನು ಸ್ಮರಿಸಿದರು.

1984ರಲ್ಲಿ ನಡೆದ ಗೋಕಾಕ್ ಚಳವಳಿಯು ರಾಜ್ಯದಲ್ಲಿ ಕನ್ನಡದ ಕುರಿತು ದೊಡ್ಡ ಮಟ್ಟದ ಜನಜಾಗೃತಿ ಮೂಡಿಸಿತು. ಧಾರವಾಡದ ವಿದ್ಯಾವರ್ಧಕ ಸಂಘವು ಈ ಐತಿಹಾಸಿಕ ಚಳವಳಿಯ ಕೇಂದ್ರಬಿಂದುವಾಗಿತ್ತು. ಅಲ್ಲಿಂದ ಆರಂಭವಾದ ಹೋರಾಟ ರಾಜ್ಯಾದ್ಯಂತ ವ್ಯಾಪಿಸಿ, ಕನ್ನಡವನ್ನು ವಿರೋಧಿಸಿದ್ದ ಸರ್ಕಾರವನ್ನೇ ಕೆಳಗಿಳಿಸುವಷ್ಟು ಪ್ರಭಾವಶಾಲಿಯಾಗಿತ್ತು ಎಂದು ಚಳವಳಿಯ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಡಾ. ಬಿ.ಎಚ್. ಮೆಟಗುಡ್ಡ, ಡಾ. ವನಿತಾ ಮೆಟಗುಡ್ಡ ಹಾಗೂ ಸಾಹಿತಿ ಯ.ರು. ಪಾಟೀಲ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಕನಶೆಟ್ಟಿ, ಸುರೇಶ್ ಹಂಜಿ, ಈರಣಗೌಡ ಪಾಟೀಲ್ ಹಾಗೂ ಡಾ. ಯಲ್ಲಪ್ಪ ಯಾಕೊಳ್ಳಿ ಅವರನ್ನು ಸನ್ಮಾನಿಸಲಾಯಿತು.
ಕೆ.ಎ. ದಯಾನಂದ, ಎಂ.ವೈ. ಮೆಣಸಿನಕಾಯಿ, ರತ್ನಪ್ರಭಾ ಬೆಲ್ಲದ, ವೀರಭದ್ರ ಅಂಗಡಿ ಹಾಗೂ ಸುನೀಲ್ ಹಲವಾಯಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

Leave a Reply

Your email address will not be published. Required fields are marked *