ಐತಿಹಾಸಿಕ ಬೆಳಗಾವಿ ಗಣೇಶೋತ್ಸವ…

ಐತಿಹಾಸಿಕ ಬೆಳಗಾವಿ ಗಣೇಶೋತ್ಸವ…

ಶಾಂತಿಯುತ ವಿಸರ್ಜನೆಗೆ ಪೊಲೀಸ್ ಇಲಾಖೆ ಸಕಲ ಸಿದ್ಧತೆ.

ಬೆಳಗಾವಿ : ಐತಿಹಾಸಿಕ ಹಿನ್ನೆಲೆಯುಳ್ಳ ಬೆಳಗಾವಿ ಗಣೇಶೋತ್ಸವದ ಕೊನೆಯ ನಾಲ್ಕು ದಿನಗಳ ಮೆರವಣಿಗೆ ಹಾಗೂ ವಿಸರ್ಜನಾ ಮಹೋತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಶಾಂತಿಯುತವಾಗಿ ಯಶಸ್ವಿಗೊಳಿಸಲು ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಕಿರಿಕಿರಿ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಗಣೇಶ ಮಂಡಳಗಳ ಹಾಗೂ ಸಾರ್ವಜನಿಕರ ಸಂಪೂರ್ಣ ಸಹಕಾರದೊಂದಿಗೆ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ.

ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ಅವರ ಅಧ್ಯಕ್ಷತೆಯಲ್ಲಿ ಇಂದು ಕೊನೆಯ ನಾಲ್ಕು ದಿನಗಳ ದಟ್ಟಣೆ ನಿರ್ವಹಣೆ ಮತ್ತು ವಿಸರ್ಜನೆಗೆ ಸಂಬಂಧಿಸಿದಂತೆ ಪ್ರಮುಖ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ಮಾತನಾಡಿದ ಡಿಸಿಪಿ ನಾರಾಯಣ್ ಬರಮನಿ ಅವರು, ಅಂತಿಮ ದಿನಗಳ ಮೆರವಣಿಗೆಗಳು ಅತ್ಯಂತ ಮಹತ್ವದ್ದಾಗಿರುವುದರಿಂದ ಗಣೇಶ ಮಂಡಳಗಳು ಪೊಲೀಸ್ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಮನವಿ ಮಾಡಿದರು.

ಮೂಲಭೂತ ಸೌಕರ್ಯಗಳಿಗೆ ಮನವಿ: ವಿಸರ್ಜನಾ ಮಾರ್ಗದಲ್ಲಿ ತೂಗಾಡುವ ವಿದ್ಯುತ್ ವೈರ್ಗಳನ್ನು ಎತ್ತರಿಸುವುದು, ರಸ್ತೆಯ ಗುಂಡಿಗಳನ್ನು ಮುಚ್ಚುವುದು ಹಾಗೂ ವಿಸರ್ಜನಾ ಕೆರೆಗಳ ಸ್ವಚ್ಛತೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಕುರಿತು ಗಣೇಶೋತ್ಸವ ಮಹಾಮಂಡಳದ ಕಾರ್ಯಕರ್ತರು ಸಭೆಯಲ್ಲಿ ಹಲವು ಮಹತ್ವದ ಸಲಹೆಗಳನ್ನು ಮಂಡಿಸಿದರು.

ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ: ಸಭೆಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್, “ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಅತಿಯಾದ ತೊಂದರೆ ಅಥವಾ ಅನಗತ್ಯ ನಿರ್ಬಂಧಗಳನ್ನು ವಿಧಿಸುವುದಿಲ್ಲ. ಆದರೆ, ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳನ್ನು ನಿಗದಿತ ಸಮಯದೊಳಗೆ ಮುಗಿಸಬೇಕು. ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯು 24 ಗಂಟೆಯೂ ಲಭ್ಯವಿರಲಿದೆ” ಎಂದು ಅಭಯ ನೀಡಿದರು. ಅಲ್ಲದೆ, ಮಂಡಳಗಳ ಪದಾಧಿಕಾರಿಗಳು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಹಾಮಂಡಳದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಡಿಸಿಪಿ ನಿರಂಜನ್ ರಾಜೇ ಅರಸ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.