ಕದಲಿಪುರ ಉಮಾರಾಮೇಶ್ವರ ದೇವಸ್ಥಾನದಲ್ಲಿ ಶ್ರಾವಣ ಸೋಮವಾರದ ವಿಶೇಷ ಪೂಜೆ..

ಕದಲಿಪುರ ಉಮಾರಾಮೇಶ್ವರ ದೇವಸ್ಥಾನದಲ್ಲಿ ಶ್ರಾವಣ ಸೋಮವಾರದ ವಿಶೇಷ ಪೂಜೆ..

ಸಾವಿರಾರು ಭಕ್ತರಿಗೆ ಮಹಾಪ್ರಸಾದ ವಿತರಣೆ.

ಬೆಳಗಾವಿ : ತಾಲೂಕಿನ ಸುಕ್ಷೇತ ದತ್ತ ಮಹಾರಾಜರ ಪವಿತ್ರ ಪಂತ ಬಾಳೇಕುಂದ್ರಿ ಗ್ರಾಮದಲ್ಲಿರುವ ಕದಲಿಪುರ ಉಮಾರಾಮೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.

ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ಭಾನುವಾರ ರಾತ್ರಿ ಆರಂಭಗೊಂಡ ವಿಶೇಷ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳು ಸೋಮವಾರ ಬೆಳಗಿನವರೆಗೂ ನಡೆದವು. ಭಕ್ತರು ಶ್ರದ್ಧೆಯಿಂದ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.
ಸೋಮವಾರ ಬೆಳಗ್ಗೆ 7 ಗಂಟೆಯಿಂದ ಗ್ರಾಮದ ವಿವಿಧ ಭಾಗಗಳಲ್ಲಿ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಭಜನಾ ತಂಡಗಳು ಗ್ರಾಮದಾದ್ಯಂತ ಸಂಚರಿಸಿ ಮಧ್ಯಾಹ್ನ 12 ಗಂಟೆಗೆ ಕದಲಿಪುರ ಉಮಾರಾಮೇಶ್ವರ ದೇವಸ್ಥಾನಕ್ಕೆ ಆಗಮಿಸಿದವು. ಬಳಿಕ ಆರತಿ ನೆರವೇರಿಸುವ ಮೂಲಕ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳಿಗೆ ವಿಧಿವತ್ತಾಗಿ ಸಮಾರೋಪ ಮಾಡಲಾಯಿತು.
ಮಧ್ಯಾಹ್ನದ ನಂತರ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಮಹಾಪ್ರಸಾದ ಸ್ವೀಕರಿಸಿದರು.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಪಾರಂಪರಿಕ ಕದಲಿಪುರ ಉಮಾರಾಮೇಶ್ವರ ದೇವಸ್ಥಾನಕ್ಕೆ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಪಂತ ಬಾಳೇಕುಂದ್ರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಕ್ತರು ಉಮಾರಾಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.