ಕನಿಷ್ಠ ವೇತನ ಹಾಗೂ ಬಾಕಿ ಗೌರವಧನ ಬಿಡುಗಡೆಗಾಗಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ..
ಬೆಳಗಾವಿ : ಬಾಕಿ ಇರುವ ಗೌರವಧನ ಹಾಗೂ ಪ್ರೋತ್ಸಾಹಧನವನ್ನು ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಬೆಳಗಾವಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟಿಸಿ, ಜಿಲ್ಲಾ ಪಂಚಾಯಿತಿ ಸಿಇಒ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಸರ್ದಾರ್ ಮೈದಾನದಿಂದ ಚೆನ್ನಮ್ಮ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ತ ಆ್ಯಪ್ ಮೂಲಕ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿರುವ ಸರ್ಕಾರ, ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಮೊಬೈಲ್ ಅಥವಾ ಟ್ಯಾಬ್ಲೆಟ್‌ಗಳನ್ನು ನೀಡಿಲ್ಲ. ಸ್ವಂತ ಮೊಬೈಲ್ ಬಳಕೆಗೆ ನೀಡುತ್ತಿದ್ದ ಮಾಸಿಕ ₹280 ಬಾಡಿಗೆಯನ್ನೂ ಸ್ಥಗಿತಗೊಳಿಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಆ್ಯಪ್‌ನಲ್ಲಿ ಮಾಹಿತಿ ದಾಖಲಿಸುವುದಕ್ಕೆ ಪ್ರತ್ಯೇಕ ಪ್ರೋತ್ಸಾಹಧನ ನಿಗದಿಪಡಿಸಬೇಕು. ಸ್ಮಾರ್ಟ್‌ಫೋನ್ ಹಾಗೂ ಆ್ಯಪ್ ಬಳಕೆಯಲ್ಲಿ ತೊಂದರೆ ಇರುವ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ನೀಡಬೇಕು. ತಾಂತ್ರಿಕ ಸಮಸ್ಯೆಗಳಿಂದ ಈಗಾಗಲೇ ದಾಖಲಿಸಿರುವ ಮಾಹಿತಿ ಸರಿಯಾಗಿ ಸೇವ್ ಆಗದೆ, ಕೆಲಸ ಮಾಡಿದರೂ ಪ್ರೋತ್ಸಾಹಧನ ಸಿಗದಂತಾಗಿರುವ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ಎಲ್ಲ ಗೌರವಧನ ಹಾಗೂ ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಟಿಬಿ, ಟಿಬಿಐ, ಎನ್‌ಸಿಡಿ ಸೇರಿದಂತೆ ವಿವಿಧ ವಿಭಾಗಗಳ ಹಲವು ವರ್ಷಗಳಿಂದ ಬಾಕಿ ಇರುವ ಪ್ರೋತ್ಸಾಹಧನ ಪಾವತಿಸಬೇಕು. ಪ್ರತಿ ತಿಂಗಳು ಪಾವತಿ ವಿವರ ಹಾಗೂ ರಿಲೀಸ್ ಕಾಪಿ ನೀಡಬೇಕು ಎಂದು ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರಿಗೆ ಅನಗತ್ಯವಾಗಿ ಹೆಚ್ಚುವರಿ ಕೆಲಸದ ಒತ್ತಡ ಹೇರುವುದನ್ನು ನಿಲ್ಲಿಸಬೇಕು. ಹತ್ತು ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಅಥವಾ ಕೆಲಸ ತೊರೆದ ಆಶಾ ಕಾರ್ಯಕರ್ತೆಯರಿಗೆ ಇಡಿಗಂಟು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.