ಖಾನಾಪುರ ತಾಲ್ಲೂಕಿನ ಅಂಗನವಾಡಿಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ..
ಇಲಾಖೆಯಲ್ಲಿ ಶಿಸ್ತು ತಂದ ಶಿಶು ಅಭಿವೃದ್ಫಿ ಯೋಜನಾಧಿಕಾರಿ..
ಖಾನಾಪುರ : ಖಾನಾಪುರ ತಾಲ್ಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಉತ್ಸಾಹ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ, ಹಬ್ಬ-ಹರಿದಿನಗಳು ಹಾಗೂ ಪೌರಾಣಿಕ ಕಥೆಗಳ ಪರಿಚಯ ಮೂಡಿಸುವುದರ ಜೊತೆಗೆ, ಅವರಲ್ಲಿರುವ ಪ್ರತಿಭೆ ಮತ್ತು ಕಲಾ ಕೌಶಲ್ಯಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಅಂಗನವಾಡಿಯ ಮಕ್ಕಳು ಶ್ರೀಕೃಷ್ಣ, ರಾಧೆ ಸೇರಿದಂತೆ ವಿವಿಧ ಪೌರಾಣಿಕ ಪಾತ್ರಗಳ ಆಕರ್ಷಕ ವೇಷಭೂಷಣ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಾಲಕೃಷ್ಣನ ವೇಷದಲ್ಲಿದ್ದ ಪುಟಾಣಿ ಮಕ್ಕಳು ಎಲ್ಲರ ಗಮನ ಸೆಳೆದರು. ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಶ್ರೀಕೃಷ್ಣನ ಬಾಲಲೀಲೆಗಳು, ಮೊಸರುಗಡಿಗೆ ಒಡೆಯುವದು ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಮಹತ್ವವನ್ನು ಮಕ್ಕಳ ವಯೋಮಾನದ ಅನುಗುಣವಾಗಿ ಸರಳ ಹಾಗೂ ಮನರಂಜನಾತ್ಮಕವಾದ ರೀತಿಯಲ್ಲಿ ವಿವರಿಸಲಾಯಿತು.

ಅಂಗನವಾಡಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿರುವ ಕ್ರಿಯಾಶೀಲ ಅಧಿಕಾರಿ..
ಖಾನಾಪುರ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ (CDPO) ವಿಕ್ರಮ ಕೆ. ಬಿ. ಅವರ ಮಾರ್ಗದರ್ಶನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರವಾಗಿ ವಿವಿಧ ನವೀನ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ವಿಕ್ರಮ ಕೆ. ಬಿ. ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಕಾಲಕಾಲಕ್ಕೆ ನೀಡುತ್ತಿರುವ ಮಾರ್ಗದರ್ಶನ, ಪ್ರೋತ್ಸಾಹ ಹಾಗೂ ಸಕಾರಾತ್ಮಕ ಬೆಂಬಲದಿಂದ ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಹಬ್ಬಗಳು, ರಾಷ್ಟ್ರೀಯ ದಿನಾಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳನ್ನು ಉತ್ಸಾಹದಿಂದ ಮತ್ತು ನಿರಂತರವಾಗಿ ಆಯೋಜಿಸಲಾಗುತ್ತಿದೆ.
ಇಂತಹ ಚಟುವಟಿಕೆಗಳಿಂದ ಮಕ್ಕಳಿಗೆ ಕೇವಲ ಹಬ್ಬ-ಹರಿದಿನಗಳ ಮಾಹಿತಿ ದೊರೆಯುವುದಷ್ಟೇ ಅಲ್ಲದೆ, ಆಟ, ಚಟುವಟಿಕೆ, ವೇಷಭೂಷಣ ಹಾಗೂ ಸಕ್ರಿಯವಾಗಿ ಭಾಗವಹಿಸುವಿಕೆಯ ಮೂಲಕ ಕಲಿಯುವ ಅವಕಾಶವೂ ದೊರೆಯುತ್ತದೆ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಅಂಗನವಾಡಿ ಕೇಂದ್ರಗಳು ಮಕ್ಕಳ ದೈಹಿಕ, ಬೌದ್ಧಿಕ, ಸಾಮಾಜಿಕ, ಭಾವನಾತ್ಮಕ ಹಾಗೂ ಭಾಷಾ ಬೆಳವಣಿಗೆಗೆ ಮಹತ್ವದ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಆಟಗಳು, ಹಾಡುಗಳು, ಕಥೆಗಳು, ಚಿತ್ರಗಳು, ಚಟುವಟಿಕೆಗಳು, ವೇಷಭೂಷಣ ಹಾಗೂ ಹಬ್ಬ-ಹರಿದಿನಗಳ ಮೂಲಕ ಮಕ್ಕಳಿಗೆ ಸಂತೋಷದಾಯಕ ರೀತಿಯಲ್ಲಿ ಶಿಕ್ಷಣ ನೀಡುತ್ತಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮದ ಮೂಲಕ “ಆಟದ ಮೂಲಕ ಕಲಿಕೆ ಮತ್ತು ಸಂಸ್ಕಾರದಿಂದ ವ್ಯಕ್ತಿತ್ವ ನಿರ್ಮಾಣ” ಎಂಬ ಸಂದೇಶವನ್ನು ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಪಾಲಕರು ಹಾಗೂ ಮಕ್ಕಳ ಉತ್ಸಾಹಭರಿತ ಭಾಗವಹಿಸುವಿಕೆಯಿಂದ ಇಡೀ ಪರಿಸರದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು.