“ನಮ್ಮ ಅಂಗನವಾಡಿ – ನಮ್ಮ ಜವಾಬ್ದಾರಿ” ಸಂದೇಶದೊಂದಿಗೆ ಪೋಷಣ್ ಅಭಿಯಾನ ಮಾಸಾಚರಣೆ ಯಶಸ್ವಿ..
ಖಾನಾಪುರದಲ್ಲಿ ತಾಯಿ-ಮಗು ಪೌಷ್ಟಿಕತೆ, ಆರೋಗ್ಯ ಹಾಗೂ ಸಮಗ್ರ ಅಭಿವೃದ್ಧಿಗೆ ಒತ್ತು..
ವಿಕ್ರಮ ಕೆ ಬಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಖಾನಾಪುರ..
ಖಾನಾಪುರ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ ಜಿಲ್ಲೆ ಇವರ ಮಾರ್ಗದರ್ಶನದಲ್ಲಿ ಖಾನಾಪುರ ತಾಲ್ಲೂಕಿನಲ್ಲಿ “ನಮ್ಮ ಅಂಗನವಾಡಿ – ನಮ್ಮ ಜವಾಬ್ದಾರಿ” ಎಂಬ ಆಶಯದೊಂದಿಗೆ ಪೋಷಣ್ ಅಭಿಯಾನ ಮಾಸಾಚರಣೆ 2026-27 ಕಾರ್ಯಕ್ರಮವು ಖಾನಾಪುರದ ಶನಾಯಾ ಗಾರ್ಡನ್ನಲ್ಲಿ ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಮೂಲಕ ಗರ್ಭಿಣಿಯರು, ಬಾಣಂತಿಯರು ಹಾಗೂ 0 ರಿಂದ 6 ವರ್ಷದೊಳಗಿನ ಮಕ್ಕಳ ಪೌಷ್ಟಿಕತೆ, ಆರೋಗ್ಯ, ಸಮತೋಲಿತ ಆಹಾರ ಮತ್ತು ಮಕ್ಕಳ ಸಮಗ್ರ ಬೆಳವಣಿಗೆ ಕುರಿತು ಜನಜಾಗೃತಿ ಮೂಡಿಸಲಾಯಿತು.

ಮಕ್ಕಳ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಉತ್ತಮ ಪೌಷ್ಟಿಕ ಆಹಾರ ಅತ್ಯಂತ ಅಗತ್ಯವಾಗಿದ್ದು, ಪೋಷಣ ಅಭಿಯಾನದ ಮೂಲಕ ಪ್ರತಿಯೊಂದು ಕುಟುಂಬದಲ್ಲಿಯೂ ಪೌಷ್ಟಿಕತೆಯ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಲಾಯಿತು.
ಅಂಗನವಾಡಿ ಕೇಂದ್ರಗಳು ಕೇವಲ ಪೌಷ್ಟಿಕ ಆಹಾರ ವಿತರಿಸುವ ಕೇಂದ್ರಗಳಲ್ಲ. ಮಕ್ಕಳ ಸಮಗ್ರ ಅಭಿವೃದ್ಧಿ, ಪೂರ್ವ ಪ್ರಾಥಮಿಕ ಶಿಕ್ಷಣ, ಆರೋಗ್ಯ ತಪಾಸಣೆ ಹಾಗೂ ತಾಯಿ-ಮಗುವಿನ ಆರೋಗ್ಯ ಮತ್ತು ಪೌಷ್ಟಿಕತೆಯ ಸಂರಕ್ಷಣೆಯಲ್ಲಿ ಅಂಗನವಾಡಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಪ್ರತಿಯೊಂದು ಅಂಗನವಾಡಿಯ ಅಭಿವೃದ್ಧಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು.

ಕಾರ್ಯಕ್ರಮಕ್ಕೆ ಖಾನಾಪುರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಕ್ರಮ ಕೆ. ಬಿ. ಅವರ ಮಾರ್ಗದರ್ಶನ ಲಭಿಸಿತು. ಅವರ ನಿರಂತರ ಮಾರ್ಗದರ್ಶನದಲ್ಲಿ ಖಾನಾಪುರ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಪೋಷಣ್ ಅಭಿಯಾನದ ವಿವಿಧ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾರದಾಬಾಯಿ ಮರಾಠೆ, ತಾಲ್ಲೂಕಿನ THO ಡಾ. ಮಹೇಶ್ ಕಿವುಡಸನ್ನವರ್, ಪಾರಿಷ್ವಾಡ್ ಬ್ಲಾಕ್ ಹೆಲ್ತ್ ಎಜುಕೇಟರ್ ಮಹಾನಂದ, ಜಿಲ್ಲಾ ಪೋಷಣ ಟ್ರ್ಯಾಕರ್ ಸಂಯೋಜಕ ರಮೇಶ್, ತಾಲ್ಲೂಕು ಪೋಷಣ್ ಟ್ರ್ಯಾಕರ್ ಸಂಯೋಜಕಿ ದ್ರಾಕ್ಷಾಯಣಿ, ಹಿರಿಯ ಮೇಲ್ವಿಚಾರಕಿಯರು, ವಲಯ ಮೇಲ್ವಿಚಾರಕೀಯರು, ಕಚೇರಿ ಸಿಬ್ಬಂದಿ ಹಾಗೂ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರನ್ನು ಗೌರವಿಸಿ ಪ್ರಶಸ್ತಿ ಹಾಗೂ ಸ್ಮರಣಿಕೆಗಳನ್ನು ನೀಡಲಾಯಿತು. ಇದರಿಂದ ಕಾರ್ಯಕ್ರಮದಲ್ಲಿ ಹರ್ಷದ ವಾತಾವರಣ ನಿರ್ಮಾಣವಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಸರಸ್ವತಿ ಬಡಸ ಅವರು ನಿರ್ವಹಿಸಿದರು. ಶ್ವೇತಾ ಹಿಟ್ಟಿನ ಅವರು ವಂದನಾರ್ಪಣೆ ಸಲ್ಲಿಸಿದರು. ಅಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಕ್ರಿಯ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
