ಪಾಲಿಕೆ ಪರಿಷತ್ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನೆ ಮಾಡಬಾರದಾ?
ಬೆದರಿಕೆಗೆ ಬಗ್ಗೋಲ, ಹಗರಣಗಳನ್ನು ಹೊರಗೆ ತರುತ್ತೇವೆ..
ನಗರ ಸೇವಕ ಸಂದೀಪ ಜಿರಗ್ಯಾಳ..
ಬೆಳಗಾವಿ : ಮಹಾನಗರ ಪಾಲಿಕೆಯಲ್ಲಿ ಸೆ.30ರಂದು ನಡೆದ ಪರಿಷತ್ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದೇ ತಪ್ಪು ಎಂಬಂತೆ ನಗರಸೇವಕರ ಮೇಲೆ ಗೂಬೆ ಕೂರಿಸುತ್ತಿರುವುದಕ್ಕೆ ಬಿಜೆಪಿ ನಗರಸೇವಕ ಸಂದೀಪ ಜೀರಗ್ಯಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಯ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡದೆ ಒಬ್ಬರು ಮತ್ತೊಬ್ಬರತ್ತ ಬೊಟ್ಟು ಮಾಡುವ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ನಾವು ಬಳಿಸಿದ ಪದ ಕೆಲವೇ ಅಧಿಕಾರಿಗಳ ವಿರುದ್ಧ ಇತ್ತು. ಈ ನಮ್ಮ ಹೇಳಿಕೆಗೆ ರಾಜಕೀಯ ರೂಪು ಕೊಟ್ಟು ಪೌರಕಾರ್ಮಿಕರು, ಎಲ್ಲ ಅಧಿಕಾರಿ ಸಿಬ್ಬಂದಿಗಳಿಗೆ ಹೇಳಿದ್ದಾರೆ ಎಂಬಂತೆ ಬಿಂಬಿಸಲಾಗಿದೆ. ಆದರೆ ರಿಕಾರ್ಡ್ ತೆಗೆದು ನೋಡಬಹುದು ನಾವು ಹಾಗೆ ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಾಲಿಕೆಯ ಸದಸ್ಯರು ಅಧಿಕಾರಿಗಳನ್ನು ಪ್ರಶ್ನೆ ಕೇಳಬಾರದಾ. ಪಾಲಿಕೆ ಆಡಳಿತ ತಪ್ಪಿದಾಗ, ಕುಸಿದಾಗ ಪ್ರಶ್ನೆ ಮಾಡುವುದು ನಮ್ಮ ಹಕ್ಕು ಎಂದರು.
ಪಾಲಿಕೆಯ ಉಪ ಆಯುಕ್ತರಾಗಿ (ಆಡಳಿತ) ಕೆಲಸ ಮಾಡುತ್ತಿರುವ ಅಧಿಕಾರಿ ಆ ಹುದ್ದೆಗೆ ಅರ್ಹರೇ?ಈಗಾಗಲೇ ದಕ್ಷಿಣದ ಶಾಸಕರು ಹೇಳಿದಂತೆ ಅವರು ಎಆರ್ ಓ ಆಗಲೂ ಅರ್ಹರಲ್ಲ. ಅಂತಹ ವ್ಯಕ್ತಿಯನ್ನು ರಾಜ್ಯ ಸರ್ಕಾರ ಎರಡು ಬಾರಿ ವರ್ಗಾವಣೆ ಮಾಡಿದರೂ ಸರ್ಕಾರಕ್ಕೆ ಚಾಲೆಂಜ್ ಮಾಡಿ ಸ್ಟೇ ತೆಗೆದುಕೊಂಡು ಬರುತ್ತಾರೆ. ಇಂತಹ ಪರಿಸ್ಥಿತಿ ನಮ್ಮ ಮಹಾನಗರ ಪಾಲಿಕೆಯಲ್ಲಿದೆ ಎಂದು ಹರಿಹಾಯ್ದರು.
ಮಹಾನಗರ ಪಾಲಿಕೆಯಲ್ಲಿ ಸಾಕಷ್ಟು ಹಗರಗಣಗಳಾಗಿವೆ. ಈ ಬಗ್ಗೆ ಪರಿಷತ್ ಸಭೆಯಲ್ಲಿಯೂ ಗಮನ ಸೆಳೆದಿದ್ದೇವೆ. ಹಗರಣ ಮಾಡಿದ ಅಧಿಕಾರಿ, ಸಂಬಂಧಿಸಿದವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಬಾರದಾ. ಪ್ರಮುಖ ಕಡತಗಳು ನಾಪತ್ತೆಯಾದವು. ಎಫಐಆರ್ ಮಾಡಿದರೂ ಸಿಗಲಿಲ್ಲ. ಇಷ್ಟೊಂದು ದುರಾಡಳಿತ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಬಗ್ಗೆ ನಗರಸೇವಕರೆಲ್ಲಾ ಸೇರಿ ಮೇಯರ, ಉಪಮೇಯರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ. ಅಲ್ಲದೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಯತೀಂದ್ರ ಅವರಿಗೂ ಮನವಿ ಮಾಡುತ್ತೇವೆ ಎಂದು ಸಂದೀಪ ಜೀರಗ್ಯಾಳ ಹೇಳಿದರು.
ಹಗರಣಗಳು ಶೀಘ್ರ ಹೊರಗೆ….
ಪಾಲಿಕೆಯಲ್ಲಿ ನಡೆದಿರುವ ಒಂದೊಂದೇ ಹಗರಣವನ್ನು ಬರುವ ದಿನಗಳಲ್ಲಿ ಹೊರಗೆ ತರಲಾಗುವುದು. ಚಾರ್ಜ್ ಇಲ್ಲದೇನೇ ಕೀ ತೆಗೆದುಕೊಂಡು ಪಿಐಡಿ ಮಾಡಿರುವ, ಭೂ ಬಾಡಿಗೆ ಕುರಿತಾದ ಟೆಂಡರನಲ್ಲಿ ನಿಯಮಗಳನ್ನು ಸರಿಯಾಗಿ ಅನುಸರಿಸುವದೇ ಇರುವದು. ಲ್ಯಾಪ್ ಟಾಪ್ ಹಂಚಿಕೆಯಲ್ಲಿ ರಾಜ್ಯ ಸರ್ಕಾರದ ಸುತ್ತೋಲೆ ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ ಕರೆದಿರುವ ವಿಷಯಗಳ ಬಗ್ಗೆ ಸಂದೀಪ ಜೀರಗ್ಯಾಳ ಗಂಭೀರ ಆರೋಪ ಮಾಡಿದರು.
ಎಫ್ ಐಆರ್ ಮಾಡಲು ಬರುವುದಿಲ್ಲ….
ಪಾಲಿಕೆ ಪರಿಷತ್ ಸಭೆಯಲ್ಲಿ ನಾವು ಪ್ರಶ್ನೆ ಎತ್ತಿದ್ದರಿಂದ ಎಫ್ ಐಆರ್ ಮಾಡುವುದಾಗಿ ಹೇಳುತ್ತಿದ್ದಾರೆ. ಪರಿಷತ್ ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಎಫಐಆರ್ ಮಾಡಲು ಅವಕಾಶ ಇದೆಯೇ? ಜನತೆಯ ಪರವಾಗಿ ನಾವು ಏನು ಪ್ರಶ್ನೆ ಮಾಡಬಾರದೆ?
ಎಂದು ಸಂದೀಪ ಜೀರಗ್ಯಾಳ
ಪ್ರಶ್ನೆ ಮಾಡಿದ್ದಾರೆ.