ಬೆಳಗಾವಿ ಪಾಲಿಕೆಯ ದಕ್ಷಿಣ ಕಂದಾಯ ಶಾಖೆಗೆ ಶಾಕ್ ನೀಡಿದ ಡಿಸಿಆರ್..
ಎರಡು ಪ್ರಕರಣಗಳಲ್ಲಿ ನೋಟೀಸ್ ಜಾರಿ ಮಾಡಿದ ಕಂದಾಯ ಉಪ ಆಯುಕ್ತರು..
ತಪ್ಪು ಮಾಡಿದ ಸಿಬ್ಬಂದಿಗಳ ಎದೆಯಲ್ಲಿ ನಡುಕ..
ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ ಕಂದಾಯ ವಿಭಾಗದ ದಕ್ಷಿಣ ಶಾಖೆಯ ಸಿಬ್ಬಂದಿಗಳಿಗೆ ಒಟ್ಟು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಕಂದಾಯ ಉಪ ಆಯುಕ್ತರಾದ ಸಿದ್ದು ಹುಲ್ಲೋಳ್ಳಿ ಅವರು ನೋಟಿಸ್ ಜಾರಿ ಮಾಡುವುದರ ಮೂಲಕ ಕರ್ತವ್ಯಲೋಪ ಎಸಗಿದ ಹಾಗೂ ಬೇಜವಾಬ್ದಾರಿ ವರ್ತನೆ ತೋರಿದ ಕಂದಾಯ ಸಿಬ್ಬಂದಿಗಳಿಗೆ ಶಾಕ್ ನೀಡಿದ್ದಾರೆ..
ಕಳೆದ ಸುಮಾರು ಎಂಟು ದಿನಗಳ ಹಿಂದೆ ಉದ್ಯಮಬಾಗ ಪ್ರದೇಶದ ಕಂದಾಯ ವಾರ್ಡ್ ಸಂಖ್ಯೆ 02ರಲ್ಲಿ ಒಂದೇ ಆಸ್ತಿಗೆ ಎರಡು ಪಿಐಡಿ ನೀಡಿದ್ದು, ಆಸ್ತಿಯ ಮಾಲೀಕ ಹಾಗೂ ಬಾಡಿಗೆದಾರನಿಗೆ ಪ್ರತ್ಯೇಕ ಆಸ್ತಿ ಸಂಖ್ಯೆ ಪೂರೈಸಿದ್ದಾರೆ, ಖರೀದಿ ಪತ್ರ, ಜಿಪಿಎಸ್ ಫೋಟೋ, ಯಾವದೂ ಪಡೆಯದೇ, ಸಾದಾ ಬಾಂಡ್ ಪೇಪರ್ ಮೇಲೆ ಇದ್ದ ಬಾಡಿಗೆ ಕರಾರು ಪತ್ರವನ್ನು ಖರೀದಿ ಪತ್ರ ಎಂದು ತಿಳಿದು ಒಂದೇ ಆಸ್ತಿಗೆ ಎರಡು ಆಸ್ತಿ ಸಂಖ್ಯೆ ನೀಡಿದ್ದಾರೆ.
ಈ ತಪ್ಪಿಗಾಗಿ ಆ ವಾರ್ಡಿನ ಕರ ವಸೂಲಿಗಾರ, ಕಂದಾಯ ನಿರೀಕ್ಷಿಕ, ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಅಧಿಕಾರಿ, ವಲಯ ಆಯುಕ್ತರು ಇವರಿಗೆಲ್ಲ ನೋಟಿಸ್ ಜಾರಿ ಆಗಿ, ಈಗ ಇಲಾಖೆಯ ತನಿಖೆಗಾಗಿ ಬರೆದಿದ್ದಾರೆ, ಇಲಾಖಾ ತನಿಖಾ ತಂಡದ ವರದಿಯಲ್ಲಿ ಏನು ಬರುತ್ತದೆ ಎಂಬುದರ ಮೇಲೆ ಈ ಸಿಬ್ಬಂದಿಗಳ ಭವಿಷ್ಯವಿದೆ.
ಇನ್ನು ಎರಡು ದಿನಗಳ ಹಿಂದೆಯಷ್ಟೇ ಇದೇ ದಕ್ಷಿಣ ಕಂದಾಯ ಶಾಖೆಯ ಕಂದಾಯ ವಾರ್ಡ ಸಂಖ್ಯೆ 9ರಲ್ಲಿ ಮತ್ತೊಂದು ಕರ್ತವ್ಯಲೋಪ ನಡೆದಿದ್ದು, ಉಪ ಆಯುಕ್ತರು (ಕಂದಾಯ) ಆ ಸಿಬ್ಬಂದಿಗಳಿಗೂ ನೋಟಿಸ್ ಜಾರಿ ಮಾಡಿದ್ದಾರೆ, ಸಬ್ ರಿಜಿಸ್ಟರ್ ಖರೀದಿ ಪತ್ರದಲ್ಲಿ 14 ಗುಂಟೆಯನ್ನು ಒಟ್ಟಾಗಿ ಖರೀದಿ ಮಾಡಿರುವ ಖರೀದಿ ಪತ್ರ ಇದ್ದಿದ್ದು, ಅದಕ್ಕೆ 14 ಜನರಿಗೆ ಪ್ರತ್ಯೇಕವಾದ ಆಸ್ತಿ ಸಂಖ್ಯೆಗಳನ್ನು (pid) ನೀಡಲಾಗಿದೆ. ಒಂದು ಖರೀದಿ ಪತ್ರಕ್ಕೆ ಒಂದೇ (ಪಿಐಡಿ) ಆಸ್ತಿ ಸಂಖ್ಯೆ ನೀಡಬೇಕಾದವರು ತಮ್ಮ ಕರ್ತವ್ಯಪ್ರಜ್ಞೆ ಮರೆತು 14 ಜನರ ಹೆಸರಲ್ಲಿ ಬೇರೆ ಬೇರೆ ಆಸ್ತಿ ಸಂಖ್ಯೆಗಳನ್ನು (pid) ನೀಡಿದ್ದಾರೆ.
ಇಲ್ಲಿಯೂ ಕೂಡಾ ಕರ ವಸೂಲಿಗಾರ, ಕಂದಾಯ ನಿರೀಕ್ಷಿಕ, ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಮುಂದೆ ಯಾವ ಕ್ರಮ ಆಗುತ್ತದೆಯೋ ಕಾದು ನೋಡಬೇಕು..
ಯಾವುದೇ ಇಲಾಖೆ ಅಥವಾ ವಿಭಾಗ ಶಿಸ್ತು ಹಾಗೂ ಕಟ್ಟುನಿಟ್ಟಿನಿಂದ ಕೆಲಸ ನಡೆಯಬೇಕೆಂದರೆ ಆ ವಿಭಾಗದ ಮುಖ್ಯ ಅಧಿಕಾರಿಗಳು ಶುದ್ಧವಾಗಿ ಸಮರ್ಥವಾಗಿ ಇರಬೇಕು, ಅದನ್ನು ಬಿಟ್ಟು ಇರ್ಲಿ ಬಿಡೋ ಇಲ್ಲೇ ಅಡ್ಜೆಸ್ಟ್ ಮಾಡಿಕೊಂಡರಾಯಿತು ಅನ್ನುವ ಅಧಿಕಾರಿಗಳು ಇರಬಾರದು, (ನಮ್ಮ ಸುತ್ತಮುತ್ತ ಅಂತ ಅಧಿಕಾರಿಗಳೂ ಇರುವರು,) ತಪ್ಪು ಮಾಡಿದವರ ಮೇಲೆ ಕಟ್ಟುನಿಟ್ಟಿನಿಂದ ಇಂತಹ ನಿರ್ಧಾರ ತಗೆದುಕೊಳ್ಳುವ ಅಧಿಕಾರಿಗಳು ಇರುವದರಿಂದ ಸಿಂಬ್ಬಂದಿಗಳಲ್ಲಿ ಶಿಸ್ತು ಇರುತ್ತದೆ ಆಗ ಸಾರ್ವಜನಿಕರಿಗೆ ಉತ್ತಮ ಸೇವೆಗಳು ಸಿಗುವದರೊಂದಿಗೆ ಇಲಾಖೆಗೂ ಉತ್ತಮ ಹೆಸರು ಬರುತ್ತದೆ ಎಲ್ಲಕ್ಕಿಂತ ಮುಖ್ಯವಾಗಿ ವೃತ್ತಿಪರತೆ ತೋರಿರುವ ಆತ್ಮತೃಪ್ತಿ ಇರುತ್ತದೆ, ಹಣ ಇಂದು ಬರುತ್ತೆ, ನಾಳೆ ಹೋಗುತ್ತೆ, ಆದರೆ ಆ ಖುರ್ಚಿಯಲ್ಲಿ ಕುಳಿತು ನಾವು ಮಾಡಿರುವ ಕೆಲಸವೇ ಕೊನೆಗೆ ನಮ್ಮೊಂದಿಗೆ ಬರುತ್ತದೆ.
ಪಾಲಿಕೆಯ ಕಂದಾಯ ವಿಭಾಗದ ಉತ್ತರ ಶಾಖೆ, ಮಧ್ಯ ಶಾಖೆ ಹಾಗೂ ಕೋಣವಾಳ ಗಲ್ಲಿಯ ಶಾಖೆಗಳ ಕಂದಾಯ ಸಿಬ್ಬಂದಿಗಳಿಗೂ ಇದೊಂದು ಎಚ್ಚರದ ಗಂಟೆಯಾಗಿದ್ದು, ಈ ಹಿಂದೆ ತಪ್ಪು ಮಾಡಿದವರ ಎದೆಯಲ್ಲಿ ನಡುಕ ಉಂಟಾದಂತೆ ಕಾಣುತ್ತಿದೆ, ಇನ್ನೂ ಮುಂದಾದರೂ ನಿಷ್ಠೆಯಿಂದ ತಮ್ಮ ಕರ್ತವ್ಯ ಮಾಡಿ ಪಾಲಿಕೆಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪಾರದರ್ಶಕವಾದ ಕೆಲಸ ಮಾಡಲಿ ಎಂಬುದು ಸಾರ್ವಜನಿಕರ ಆಶಯ..
ವರದಿ ಪ್ರಕಾಶ್ ಬಿ ಕೆ..