ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮದ ಆರೋಪ..
ಅಕ್ರಮ ಮತದಾರರನ್ನು ತಡೆಯುವದು ತಪ್ಪೇ??
ಮಾಜಿ ಶಾಸಕ ಅನಿಲ್ ಬೆನಕೆ.
ಬೆಳಗಾವಿ : ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ‘ಫಾರ್ಮ್–7’ ಅಡಿಯಲ್ಲಿ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ದಬ್ಬಾಳಿಕೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಶಾಸಕ ಅನಿಲ್ ಬೆನಕೆ ಆರೋಪಿಸಿದರು.
ಶುಕ್ರವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮಾನುಸಾರ ಬಿಎಲ್ಎ–2ರ ಸಹಿ ಪಡೆದು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ, ವೀರಭದ್ರನಗರ ಬೂತ್ನಲ್ಲಿ ಆಕ್ಷೇಪಣೆ ಸಲ್ಲಿಸಲು ತೆರಳಿದ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಲಾಗಿದ್ದು, ಅರ್ಜಿಗಳ ಮೇಲೆ ಕ್ರಮ ಕೈಗೊಳ್ಳದಂತೆ ಬಿಎಲ್ಒಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ದೂರಿದರು.
ಅಕ್ರಮ ವಲಸಿಗರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇದ್ದರೆ ಅವುಗಳನ್ನು ಪರಿಶೀಲಿಸಿ ತೆಗೆದುಹಾಕುವುದು ತಪ್ಪೇ ಎಂದು ಪ್ರಶ್ನಿಸಿದ ಅವರು, ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಶೇ.70ರಿಂದ 80ರಷ್ಟು ಬಿಎಲ್ಒಗಳು ಒಂದೇ ಸಮುದಾಯಕ್ಕೆ ಸೇರಿದವರಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಕಾಂಗ್ರೆಸ್ ಶಾಸಕ ಆಸಿಫ್ ಸೇಠ್ ಅವರ ಪುತ್ರ ಅಧಿಕೃತ ಹುದ್ದೆ ಇಲ್ಲದಿದ್ದರೂ ಮುಖ್ಯಮಂತ್ರಿಗೆ ದಾಖಲೆ ಸಲ್ಲಿಸಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬೆನಕೆ ಆರೋಪಿಸಿದರು. ರೋಹಿಂಗ್ಯಾಗಳ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.