ವಿಶ್ವ ಸ್ತನ್ಯಪಾನ ಸಪ್ತಾಹ..
ತಾಯಿಯ ಎದೆಹಾಲೇ ಮಗುವಿನ ಮೊದಲ ರಕ್ಷಾಕವಚ..
ಬೆಳಗಾವಿ : ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ವಂಟಮುರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀ ಮಹಾದೇವ ರಾಠೋಡ್ ಉದ್ಘಾಟಿಸಿ ಮಾತನಾಡಿ, ತಾಯಿಯ ಎದೆಹಾಲು ಮಗುವಿಗೆ ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದ್ದು, ಜನನದ ನಂತರ ಮೊದಲ ಆರು ತಿಂಗಳವರೆಗೆ ಕೇವಲ ತಾಯಿಯ ಎದೆಹಾಲನ್ನೇ ನೀಡಬೇಕು ಎಂದು ಕರೆ ನೀಡಿದರು. ಎದೆಹಾಲು ಮಗುವಿಗೆ ಸಂಪೂರ್ಣ ಪೌಷ್ಟಿಕ ಆಹಾರವಾಗಿರುವುದರ ಜೊತೆಗೆ ರೋಗಗಳಿಂದ ರಕ್ಷಿಸುವ ಮೊದಲ ರಕ್ಷಾಕವಚವೂ ಆಗಿದೆ ಎಂದು ತಿಳಿಸಿದರು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ರಮೇಶ್ ದಂಡಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ಸ್ತನ್ಯಪಾನ ಸಪ್ತಾಹದ ಉದ್ದೇಶ ಹಾಗೂ ಅದರ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಾತನಾಡಿ, ಆಗಸ್ಟ್ 1ರಿಂದ 7ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸುವ ಮೂಲಕ ಗರ್ಭಿಣಿಯರು, ಬಾಣಂತಿಯರು ಹಾಗೂ ಸಾರ್ವಜನಿಕರಲ್ಲಿ ಸ್ತನ್ಯಪಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
“ಮೊದಲ ಆಹಾರ – ಮೊದಲ ಉಡುಗೊರೆ; ತಾಯಿಯ ಎದೆಹಾಲಿನ ಪೋಷಣೆ ಎಲ್ಲರ ಜವಾಬ್ದಾರಿ” ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಾಧಿಕಾರಿಗಳಾದ ಡಾ. ಎಸ್. ಎಸ್. ಸಾಯನ್ನವರ್ ಅವರು 2026ರ ವಿಶ್ವ ಸ್ತನ್ಯಪಾನ ಸಪ್ತಾಹದ ಧ್ಯೇಯವಾಕ್ಯವಾದ “ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ: ಪರಿಣಾಮಕಾರಿ ಬೆಂಬಲ ವ್ಯವಸ್ಥೆಗಳನ್ನು ಸದೃಢಗೊಳಿಸೋಣ” ಎಂಬ ಸಂದೇಶದ ಕುರಿತು ಮಾಹಿತಿ ನೀಡಿ, ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಸ್ತನ್ಯಪಾನದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಸಂಜಯ್ ನಾಂದ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಪ್ರಾಚೀತಿ ಉದಯ್ ಕುಮಾರ್, ಡಾ. ಸನ್ಮತಿ, ಡಾ. ಮಹಾಂತೇಶ್, ಡಾ. ಅನುಷಾ ಪಾಟೀಲ ಸೇರಿದಂತೆ ವೈದ್ಯರು, ಆರೋಗ್ಯ ಸಿಬ್ಬಂದಿ, ಗರ್ಭಿಣಿಯರು, ಬಾಣಂತಿಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮದ ಸ್ವಾಗತ, ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರಕಾಶ್ ಜಿ. ಮಾಣೆ ಅವರು ನಿರ್ವಹಿಸಿದರು.