11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಬೃಹತ್ ಜಾಥಾ..
ಬೆಳಗಾವಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ್ ಇಲಾಖೆ ಬೆಳಗಾವಿ ಹಾಗೂ ಐಸಿಎಂಆರ್–ಎನ್ಐಟಿಎಂ ಮತ್ತು ಜಿಲ್ಲೆಯ ವಿವಿಧ ಆಯುಷ್ ವೈದ್ಯಕೀಯ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಮಂಗಳವಾರ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಬೃಹತ್ ಜಾಥಾ ಕಾರ್ಯಕ್ರಮ ಜರುಗಿತು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ ಹಾಗೂ ಕೆಎಲ್ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸುಹಾಸ್ ಶೆಟ್ಟಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಶ್ರೀಕಾಂತ ಬಿ. ಸುಣಧೋಳಿ, 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪೂರ್ವಭಾವಿಯಾಗಿ ಈ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಯುರ್ವೇದ ಹಾಗೂ ಆಯುಷ್ ಪದ್ಧತಿಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಆರೋಗ್ಯಕರ ಜೀವನ ಶೈಲಿಯಲ್ಲಿ ನಡಿಗೆ ಹಾಗೂ ದೈಹಿಕ ಚಟುವಟಿಕೆಗಳ ಮಹತ್ವವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಧರ್ಮವೀರ ಸಂಭಾಜಿ ವೃತ್ತ (ಬೋಗಾರ್ವೇಸ್) ವರೆಗೆ ಬೃಹತ್ ಜಾಥಾ ಜರುಗಿತು. ಜಾಥಾದಲ್ಲಿ ಆಯುರ್ವೇದ ಮತ್ತು ಆಯುಷ್ ಪದ್ಧತಿಗಳ ಮಹತ್ವ ಸಾರುವ ಫಲಕಗಳನ್ನು ಹಿಡಿದು, ಆರೋಗ್ಯಕರ ಜೀವನಶೈಲಿಯ ಸಂದೇಶಗಳನ್ನು ಜನರಿಗೆ ತಲುಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಆಯುಷ್ ಇಲಾಖೆ ವೈದ್ಯರು, ಸಿಬ್ಬಂದಿಗಳು ಹಾಗೂ ವಿವಿಧ ಆಯುಷ್ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಜಾಥಾದಲ್ಲಿ ಭಾಗವಹಿಸಿದ್ದರು.