ಪಾಲಿಕೆ ಸಭೆಯಲ್ಲಿ ಕನ್ನಡಪರ ವಿಷಯ ಮಂಡಿಸಿದ ನಗರ ಸೇವಕ ರಮೇಶ ಸೊಂಟಕ್ಕಿ..

ಪಾಲಿಕೆ ಸಭೆಯಲ್ಲಿ ಕನ್ನಡಪರ ವಿಷಯ ಮಂಡಿಸಿದ ನಗರ ಸೇವಕ ರಮೇಶ ಸೊಂಟಕ್ಕಿ..

ಆಡಳಿತ ಪಕ್ಷ ಬಿಜೆಪಿಯಲ್ಲೇ ಕನ್ನಡ, ಮರಾಠಿ ಬೆಂಬಲದಲ್ಲಿ ಗೊಂದಲ..

ಸಭೆಯಲ್ಲಿ ಕನ್ನಡದ ಪರವಾಗಿ ನಿಂತ ಮೇಯರ್ ಹಾಗೂ ಉಪ ಮೇಯರ್..

ಬೆಳಗಾವಿ : ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಮಹಾಜನ ವರದಿಯೇ ಅಂತಿಮ ಎಂಬ ವಿಷಯವನ್ನು ಪಾಲಿಕೆಯ ನಾಮನಿರ್ದೇಷಿತ ನಗರ ಸೇವಕ ರಮೇಶ ಸೊಂಟಕ್ಕಿ ಅವರು ಮಂಡಿಸಿದ್ದು, ಇದಕ್ಕೆ ಅನೇಕ ಪರ ವಿರೋಧದ ಅಭಿಪ್ರಾಯಗಳು ಉಂಟಾಗಿ ಕೊನೆಗೆ ಈ ವಿಷಯವನ್ನು ಪಾಲಿಕೆ ಸಭೆಯಲ್ಲಿ ಚರ್ಚೆ ಮಾಡಬೇಕೋ ಬೇಡವೋ ಎಂಬ ಅಭಿಪ್ರಾಯಕ್ಕಾಗಿ ನಗರಾಭಿವೃದ್ಧಿ ಇಲಾಖೆಗೆ ಕಳಿಸುವದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬುಧವಾರ ಪಾಲಿಕೆಯ ಪರಿಷತ್ ಸಭಾಭವನದಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕನ್ನಡಪರವಾದ ವಿಷಯವನ್ನು ಮಂಡಿಸಿ, ಅದು ಅಂಗೀಕಾರ ಮಾಡಬೇಕು ಎಂದು ಪಟ್ಟು ಹಿಡಿದ ನಾಮನಿರ್ದೇಷಿತ ನಗರ ಸೇವಕರುಗಳಾದ ರಮೇಶ ಸೊಂಟಕ್ಕಿ ಹಾಗೂ ದಿನೇಶ್ ನಾಶಿಪುಡಿ ಅವರು, ಹಲವಾರು ಕನ್ನಡಪರ ಸಂಘಟನೆಗಳು ಈಗಾಗಲೇ ಈ ವಿಷಯದ ಸಲುವಾಗಿ ಪಾಲಿಕೆಗೆ ಮನವಿ ನೀಡಿದ್ದಾರೆ, ಕನ್ನಡಿಗರ ಕ್ಷೇಮಕ್ಕಾಗಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಣಯ ಪಾಸ್ ಮಾಡಿ ಸರ್ಕಾರಕ್ಕೆ ಕಳುಹಿಸಿ ಎಂದು ಮಹಾಪೌರರಲ್ಲಿ ಮನವಿ ಮಾಡಿಕೊಂಡರು..

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಬ್ಬರು ಎಂಇಎಸ್ ನಗರ ಸೇವಕರು, ಬೆಳಗಾವಿ ಗಡಿ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿ ಇರುವಾಗ ಇದರ ಬಗ್ಗೆ ಇಲ್ಲಿ ಚರ್ಚೆ ಮಾಡಲು ಬರುವದಿಲ್ಲ ಎಂದು ಇದಕ್ಕೆ ನಾವು ಅವಕಾಶ ಮಾಡಿ ಕೊಡುವದಿಲ್ಲ ಎಂದು ಸಭೆಯಲ್ಲಿ ಗಲಾಟೆ ಪ್ರಾರಂಭಿಸಿದರು, ಆಗ ನಗರ ಸೇವಕ ದಿನೇಶ್ ನಾಶಿಪುಡಿ ಅವರು ಮಾತನಾಡುತ್ತ, ನಿಮ್ಮ ಬಗ್ಗೆ ಗೊತ್ತಿದೆ ನೀವು ಸುಮ್ಮನೆ ಕುಳಿತುಕೊಳ್ಳಿ ನಾವು ಮಾತನಾಡುತ್ತೇವೆ, ನಿಮಗೆ ಅವಕಾಶ ಕೊಟ್ಟಾಗ ನೀವು ಮಾತನಾಡಿ ಎಂದು ಕಿಡಿ ಕಾರಿದರು.

ಮಹಾಪೌರಾರು ಮಧ್ಯ ಪ್ರವೇಶಿಸಿ ಈಗ ನಾನು ರಮೇಶ ಸೊಂಟಕ್ಕಿ ಅವರಿಗೆ ಮಾತನಾಡಲು ಅವಕಾಶ ನೀಡಿರುವೆ ಅವರು ಮಾತನಾಡಲಿ ಸುಮ್ಮನೆ ಮಧ್ಯ ಪ್ರವೇಶಿಸಿ ಗಲಾಟೆ ಮಾಡಬಾರದು ಎಂದು ಸೂಚನೆ ನೀಡಿದ್ದು, ಅವರಿಗೆ ಉತ್ತರ ನೀಡಲಾದರೂ ಅವಕಾಶ ಮಾಡಿ ಕೊಡಬೇಕು ಎಂದರು, ಅದಕ್ಕೆ ಉಪ ಮಹಾಪೌರಾರು ಕೂಡಾ ಹೀಗೆ ನೀವು ಮಾತನಾಡಲು ಕೊಡದೇ ಗಲಾಟೆ ಮಾಡಿದರೆ ಏನೂ ಆಗೋಲ್ಲ, ಅವರ ಮನವಿಯನ್ನು ನಾವು ಪರಿಗಣಿಸುತ್ತೇವೆ ಹಾಗೂ ಅದಕ್ಕೆ ಉತ್ತರವನ್ನೂ ನೀಡುತ್ತೇವೆ ಎಂದರು..

ಆದರೂ ಕೂಡಾ ತಮ್ಮ ವಾದ ನಿಲ್ಲಿಸದೇ ಮಾತನಾಡಿದ ಎಂಇಎಸ್ ನಗರ ಸೇವಕರು, ಕಡೆಯ ಪಕ್ಷ ಮತದಾನದ ಮೂಲಕ ಆದರೂ ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಇಲ್ಲಿ 58ಜನರಲ್ಲಿ ಯಾರು ಕನ್ನಡಪರ, ಯಾರು ಮರಾಠಿಪರ ಎಂದು ತೀರ್ಮಾನವಾಗಲಿ ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ನಗರ ಸೇವಕ ರಮೇಶ ಸೊಂಟಕ್ಕಿ ಅವರು ವಿಧಾನ ಮಂಡಲದಲ್ಲಿ ಈಗಾಗಲೇ ಆರು ಸಲ ಈ ವಿಷಯವನ್ನು ತಗೆದುಕೊಂಡಿದ್ದಾರೆ, ಈ ವಿಷಯದಲ್ಲಿ ನಿಮಗೆ ಚರ್ಚೆ ಮಾಡುವ ಆಸಕ್ತಿ ಇಲ್ಲದಿದ್ದರೆ ನೀವು ಹೊರ ಹೋಗಬಹುದು ಎಂದರು.

ಆಗ ಮಾತನಾಡಿದ ಆಡಳಿತ ಪಕ್ಷದ ನಾಯಕ ಈ ವಿಷಯವನ್ನು ಇಲ್ಲಿ ಚರ್ಚೆ ಮಾಡಬೇಕೋ ಮಾಡಬಾರದೋ ಎಂಬುದಾಗಿ ಕಾನೂನು ಸಲಹೆಗಾರರ ಸಲಹೆ ಪಡೆದು ಮುಂದುವರೆಯಬೇಕು ಎಂದರು, ಆಗ ಎಂಇಎಸ್ ಸದಸ್ಯರು ಮತ್ತೆ ಗಲಾಟೆ ಮಾಡಿದಾಗ, ದಿನೇಶ್ ನಾಶಿಪುಡಿ ಅವರು ಮಾತನಾಡಿ, ಮೊದಲು ನೀವು ಮಹಾಪೌರರ ಅಪ್ಪಣೆ ತಗೆದುಕೊಂಡು ಮಾತನಾಡಿ, ಎಲ್ಲಾ ಸೌಲಭ್ಯಗಳನ್ನು ಇಲ್ಲಿಂದ ಪಡೆದು ಮತ್ತೆ ಕನ್ನಡ ವಿರುದ್ಧವೇ ಮಾತನಾಡುವದು ಎಂತ ವಿಕೃತಿ ಎಂದರು.

ನಂತರ ಕಾನೂನು ಅಧಿಕಾರಿಯ ಮಾಹಿತಿಯಂತೆ, ಕನ್ನಡಪರ ವಿಷಯದ ಚರ್ಚೆಯನ್ನು ಪಾಲಿಕೆ ಸಭೆಯಲ್ಲಿ ಮಾಡಬೇಕೋ ಅಥವಾ ಮಾಡಬಾರದೋ ಎಂಬ ಅಭಿಪ್ರಾಯಕ್ಕಾಗಿ ನಗರಾಭಿವೃದ್ಧಿ ಇಲಾಖೆಗೆ ಕಳಿಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಇಷ್ಟೆಲ್ಲಾ ಗಲಾಟೆ ನಡೆದಿದ್ದರೂ ಕೆಲವೇ ಕೆಲವು ನಗರ ಸೇವಕರು ಈ ವಿಷಯದ ಕುರಿತಾಗಿ ಮಾತನಾಡಿದ್ದು, ಬಿಜೆಪಿ ಹಾಗೂ ವಿರೋಧ ಪಕ್ಷದ ನಗರ ಸೇವಕರಲ್ಲಿ ಕನ್ನಡ ಹಾಗೂ ಮರಾಠಿ ಯಾವುದಕ್ಕೆ ಬೆಂಬಲ ನೀಡಬೇಕು ಎಂಬ ಗೊಂದಲದಲ್ಲೇ ಇದ್ದಿದ್ದು, ಆಡಳಿತ ಪಕ್ಷ ಬಿಜೆಪಿಯಲ್ಲಿಯೇ ಒಂದಿಷ್ಟು ಜನ ಕನ್ನಡ ಕಡೆಗೆ ಮತ್ತೊಂದಿಷ್ಟು ಜನ ಮಾರಾಠಿ ಕಡೆಗೆ ತಮ್ಮ ಆಸಕ್ತಿ ತೋರುತ್ತಿರುವ ಅನುಮಾನದ ಛಾಯೆ ಕಾಣುತ್ತಿತ್ತು.

ಒಟ್ಟಿನಲ್ಲಿ ಕನ್ನಡಪರ ವಿಷಯದ ಅಂಗೀಕಾರ ಮಾಡುವ ವಿಚಾರದಲ್ಲಿ ಪಾಲಿಕೆ ಇಂದು ಸಧ್ಯಕ್ಕೆ ಬೀಸೋ ದೊಣ್ಣಿಯಿಂದ ತಪ್ಪಿಸಿಕೊಂಡಂತೆ ಕಾಣುತ್ತಿದ್ದು, ಮುಂದೆ ಈ ವಿಚಾರ ಯಾವ ರೂಪ ತಾಳಿ ಎಲ್ಲಿವರೆಗೆ ಹೋಗುತ್ತದೆಯೋ ಎಂದು ಕನ್ನಡಿಗರು ಕಾದು ನೋಡಬೇಕಾಗಿದೆ..

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *