ತಾಲೂಕು ಪಂಚಾಯತಿಯಲ್ಲಿ 32 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ..
ದ್ವಿ ದ ಸಹಾಯಕ ಎಂ.ಕೆ. ಪುರೋಹಿತ ಅವರಿಗೆ ತಾ.ಪಂ. ವತಿಯಿಂದ ಆತ್ಮೀಯ ಬೀಳ್ಕೊಡುಗೆ..
ಬೆಳಗಾವಿ : ತಾಲೂಕು ಪಂಚಾಯತಿ ಕಚೇರಿಯ ಸಿಬ್ಬಂದಿ, ಪ್ರಥಮ ದರ್ಜೆ ಸಹಾಯಕರಾದ ಎಂ.ಕೆ. ಪುರೋಹಿತ ಅವರು 32 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ಹಿನ್ನೆಲೆಯಲ್ಲಿ, ಅವರನ್ನು ಬೆಳಗಾವಿ ತಾಲೂಕು ಪಂಚಾಯತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಬುಧವಾರ ಸಂಜೆ ತಾಲೂಕು ಪಂಚಾಯತಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಯಶವಂತಕುಮಾರ ಅವರು ಪುರೋಹಿತ ಅವರನ್ನು ಶಾಲು, ಹಾರ, ಫಲ-ಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಪುರೋಹಿತ ಅವರು ಕಚೇರಿಯಲ್ಲಿ ಸಲ್ಲಿಸಿದ ಪ್ರಾಮಾಣಿಕ, ನಿಷ್ಠಾವಂತ ಹಾಗೂ ದಕ್ಷ ಸೇವೆಯನ್ನು ಇ ಓ ಅವರು ಸ್ಮರಿಸಿ, ಅವರ ಮುಂದಿನ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಬಳಿಕ, ಎಂ.ಕೆ. ಪುರೋಹಿತ ಅವರ ಸೇವೆಯನ್ನು ಗೌರವಿಸಿ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಯಶವಂತಕುಮಾರ ಅವರು ತಮ್ಮ ಸರ್ಕಾರಿ ವಾಹನದಲ್ಲಿಯೇ ಅವರನ್ನು ಗೌರವಪೂರ್ವಕವಾಗಿ ಮನೆಗೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಪುರೋಹಿತ ಅವರಿಗೆ ಶುಭ ಕೋರಿದರು.