ಪಾಲಿಕೆಯ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಅವಿರೋಧ ಆಯ್ಕೆ..
ದಕ್ಷಿಣಕ್ಕೆ ಮೂರು ಉತ್ತರಕ್ಕೆ ಒಂದು ಅಧ್ಯಕ್ಷ ಸ್ಥಾನ..
ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ ಸ್ಥಾಯಿ ಸಮಿತಿಗಳ ನಾಲ್ಕು ಅಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಜರುಗಿದ್ದು, ಒಂದೊಂದು ಸಮಿತಿಗಳಲ್ಲಿ ಒಂದೊಂದೇ ನಾಮಪತ್ರಗಳನ್ನು ಸಲ್ಲಿಸಿದ್ದು, ನಾಲ್ಕೂ ಅಧ್ಯಕ್ಷ ಸ್ಥಾನಗಳ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಸೋಮವಾರ ದಿನಾಂಕ 17/08/2026 ರಂದು ಸಂಜೆ 3-30ಕ್ಕೆ ಪಾಲಿಕೆಯ ಪರಿಷತ್ ಸಭಾ ಭವನದಲ್ಲಿ ಮೇಯರ್ ಪ್ರೀತಿ ಕಾಮಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಚುನಾವಣೆಯಲ್ಲಿ ನಾಲ್ಕು ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು, ದಕ್ಷಿಣ ಮತಕ್ಷೇತ್ರಕ್ಕೆ ಮೂರು, ಉತ್ತರ ಮತಕ್ಷೇತ್ರಕ್ಕೆ ಒಂದು ಎಂಬಂತೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.

ತೆರಿಗೆ, ಹಣಕಾಸು ಹಾಗೂ ಆಫೀಲುಗಳ ಸ್ಥಾಯಿ ಸಮಿತಿಗೆ ರಮೇಶ ಮೈಲುಗೋಳ, ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ರಾಜು ಬಾತಕಾಂಡೆ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ಶ್ರೇಯಸ್ ನಾಕಾಡಿ, ಹಾಗೂ ಲೆಕ್ಕಗಳ ಸ್ಥಾಯಿ ಸಮಿತಿಗೆ ಸಾರಿಕಾ ಪಾಟೀಲ ಅವರುಗಳನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಮೇಯರ ಪ್ರೀತಿ ಕಾಮಕರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಆಯ್ಕೆ ಪ್ರಕ್ರಿಯೆಯಲ್ಲಿ ಉಪ ಮೇಯರ ಹನಮಂತ ಕೊಂಗಾಲಿ, ಪಾಲಿಕೆ ಆಯುಕ್ತ ಕಾರ್ತಿಕ ಎಂ, ಪರಿಷತ್ ಕಾರ್ಯದರ್ಶಿ ರಮೇಶ್ ಬಡಿಗೇರ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರುಗಳು ಪಾಲಿಕೆ ಸಿಬ್ಬಂದಿಗಳು ಉಪಸ್ಥಿತರಿದ್ದರು.