ನಗರ ಸೇವಕನ ವಿರುದ್ಧ ಪಾಲಿಕೆ ಸಿಬ್ಬಂದಿ ಪ್ರತಿಭಟನೆ..
ಬೆಳಗಾವಿ : ಮಹಾನಗರ ಪಾಲಿಕೆಯ ಪರಿಷತ್ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಹಾಗೂ ನಗರ ಸೇವಕರ ನಡುವೆ ಉಂಟಾದ ಮಾತಿನ ಚಕಮಕಿ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಭೆಯಲ್ಲಿ ಎಂಐಎಂ ಪಾಲಿಕೆ ಸದಸ್ಯ ಶಾಹಿದ್ ಪಠಾಣ ಅವರು ಅಧಿಕಾರಿಗಳ ವಿರುದ್ಧ ಆಕ್ಷೇಪನಾರ್ಹವಾಗಿ ಮಾತನಾಡಿದ್ದಾರೆ, ಮಹಿಳಾ ಅಧಿಕಾರಿಗೆ ಅವಹೇಳನ, ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು. ತಪ್ಪು ಮಾತನಾಡಿದ ನಗರ ಸೇವಕ ಕ್ಷಮೆ ಯಾಚಿಸಬೇಕು ಎಂದು ಸಿಬ್ಬಂದಿ ಪಟ್ಟು ಹಿಡಿದು ಪಾಲಿಕೆಯ ಮುಂಭಾಗದಲ್ಲಿ ಧರಣಿ ಕುಳಿತಿದ್ದರು.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉತ್ತರ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರು ಅಧಿಕಾರಿಗಳು ಹಾಗೂ ನಗರ ಸೇವಕರು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಪಾಲಿಕೆಯ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದು ಅಗತ್ಯ. ವೈಯಕ್ತಿಕ ದ್ವೇಷ ಹಾಗೂ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಜನರ ಹಿತಕ್ಕಾಗಿ ಕೆಲಸ ಮಾಡಬೇಕು, ಇಲ್ಲಿ ಯಾರದೇ ತಪ್ಪಿದ್ದರೂ ನಾನು ಕ್ಷಮೆ ಕೇಳುತ್ತೇನೆ, ಎಲ್ಲರೂ ಒಂದಾಗಿ ಕೆಲಸ ಮಾಡಿ ಎಂದು ಶಾಸಕ ಆಸೀಫ್ ಸೇಠ್ ಹೇಳಿದರು.
ಇನ್ಮುಂದೆ ಇಂತಹ ಘಟನೆಗಳು ಯಾವತ್ತೂ ಆಗದೇ ಹಾಗೆ ನೋಡಿಕೊಳ್ಳಲು ಶಾಸಕರು, ನಗರ ಸೇವಕರು ಹಾಗೂ ಅಧಿಕಾರಿಗಳನ್ನೊಳಗೊಂಡ ಒಂದು ಸಮಿತಿಯನ್ನು ರಚನೆ ಮಾಡುತ್ತೇವೆ, ಏನೇ ಸಮಸ್ಯೆ ಇದ್ದರೂ ಸಮಿತಿ ಸದಸ್ಯರು ಪರಿಹರಿಸುತ್ತಾರೆ ಎಂದರು.

ಮೇಯರ್ ಪ್ರೀತಿ ಕಾಮಕರ ಮಾತನಾಡಿ, ಪಾಲಿಕೆಯಲ್ಲಿ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಂದಾಗಿ ಕೆಲಸ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಪಾಲಿಕೆ ಆಯುಕ್ತ ಕಾರ್ತಿಕ ಎಂ. ಅವರು ಮಾತನಾಡಿ, ಅಧಿಕಾರಿಗಳು ಹಾಗೂ ಸದಸ್ಯರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವ ಮೂಲಕ ಪಾಲಿಕೆಯ ಆಡಳಿತವನ್ನು ಸುಗಮವಾಗಿ ನಡೆಸಬೇಕು ಎಂದು ತಿಳಿಸಿದರು.
ಪ್ರತಿಭಟಣೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಾದ, ಲಕ್ಷ್ಮಿ ಸುಳಗೇಕರ, ಸಿದ್ದು ಹುಲ್ಲೋಳ್ಳಿ, ಉದಯಕುಮಾರ ತಳವಾರ, ಅನಿಲ ಬೋರಗಾವಿ, ಮಹಾಂತೇಶ ನಾಯಕ, ಮಾಜಿ ಕೊತ್ವಲ, ಮೇತ್ರಿ, ಅನುರಾದಾ ತಪಸಿ, ಸಂತೋಷ ಒಸಿ, ಯಲ್ಲೇಶ ಬಚ್ಚಲಪುರಿ, ಮಲಿಕ್ ಗುಂಡಪ್ಪನವರ ಸಂಜಯ ಪಾಟೀಲ, ಸಾಗರ ಕಾಂಬ್ಳೆ, ಅಂಕಿತ, ಅನೂಪ, ತಳಕೇರಿ, ಪ್ರಕಾಶ ಸೇತ ಸನದಿ, ಸಾತಕ್ಕ ತಳವಾರ, ಸುವರ್ಣ, ಮಾರುತಿ, ಭರತ ಕೊಲ್ಕಾರ, ಅಭಿಷೇಕ್ ಕಂಗ್ರಾಲೀಕರ, ಹನಮಂತ ಕಲಾದಗಿ, ಸುರೇಶ ದ್ಯಾವಣ್ಣವರ, ದೇಸಾಯಿ, ಕುಮಾರ ಕೋಲಕಾರ ಮತ್ತಿತರರು ಭಾಗಿಯಾಗಿದ್ದರು.