ತ್ಯಾಜ್ಯ ಸಮರ್ಪಕ ವಿಲೇವಾರಿ ಹಾಗೂ ಮರುಬಳಕೆ ಇಂದಿನ ಅಗತ್ಯ..

ತ್ಯಾಜ್ಯ ಸಮರ್ಪಕ ವಿಲೇವಾರಿ ಹಾಗೂ ಮರುಬಳಕೆ ಇಂದಿನ ಅಗತ್ಯ..

ಪಾಲಿಕೆ ಆಯುಕ್ತ ಕಾರ್ತಿಕ್ ಎಂ.

ಬೆಳಗಾವಿ : ಘನ ತ್ಯಾಜ್ಯ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ತಂತ್ರಜ್ಞಾನದ ಸಹಕಾರದಿಂದ ಸಮರ್ಪಕವಾಗಿ ವಿಲೇವಾರಿ ಸಹಿತ ಮರುಬಳಕೆ ಮಾಡುವದು ಇಂದಿನ ಅಗತ್ಯವಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಹೇಳಿದರು.

ಕರ್ನಾಟಕ ಸರ್ಕಾರ ನಗರಾಭಿವೃದ್ಧಿ ಇಲಾಖೆಯಿಂದ ಸ್ವಚ್ಛ ಭಾರತ ಮಿಷನ್ (ನಗರ) ಅಡಿಯಲ್ಲಿ ನಗರದ ಸುವರ್ಣ ಸೌಧದಲ್ಲಿ ಶನಿವಾರ ಆಯೋಜಿಸಲಾಗಿದ್ದ
“ಕರಡು ಘನ ತ್ಯಾಜ್ಯ ನಿರ್ವಹಣಾ ಉಪನಿಯಮಗಳ ಕುರಿತು ಸ್ಥಳೀಯ ಸಂಸ್ಥೆಗಳಿಗಾಗಿ ರಾಜ್ಯಮಟ್ಟದ ಬೆಳಗಾವಿ ಮತ್ತು ಕಲಬುರಗಿ ವಿಭಾಗವಾರು ಭಾಗಿದಾರರ ಸಭೆ” ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತ್ಯಾಜ್ಯ ನಿರ್ವಹಣೆ ನಿಯಮಗಳನ್ನು 2016 ರಿಂದ ಆಗಾಗ ಪರಿಷ್ಕರಣೆ ಮಾಡಲಾಗಿದ್ದು, ಸರ್ಕಾರದ ಮಾರ್ಗದರ್ಶನದಲ್ಲಿ ಇಲಾಖೆ ಪರಿಷ್ಕರಣೆ ಹಾಗೂ ಹೊಸ ನಿಯಮಗಳ ಸೇರ್ಪಡೆಗೆ ಮುಂದಾಗಿದ್ದು, ಭಾಗಿದಾರರ ಸಲಹೆ ಅಭಿಪ್ರಾಯಗಳ ಕ್ರೋಢೀಕರಣದ ಹಿನ್ನೆಲೆಯಲ್ಲಿ ಈ ಸಭೆ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ ಮಾತನಾಡಿ, ತ್ಯಾಜ್ಯ ನಿರ್ವಹಣೆಯೂ ಸಹ ದೈನಂದಿನ ಕೆಲಸಗಳ ಭಾಗವೆಂದು ಸಾರ್ವಜನಿಕರು ಅರಿತುಕೊಂಡಾಗ ವಿಲೇವಾರಿ ಕಠಿಣ ವಾಗಲಾರದು ಈ ಹಿನ್ನೆಲೆಯಲ್ಲಿ ಇಂದು ಜನಜಾಗೃತಿಯಾಗಿದ್ದು, ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ
ತ್ಯಾಜ್ಯ ವೈಜ್ಞಾನಿಕ ನಿರ್ವಹಣೆ ಕಾರ್ಯ ಯಶಸ್ವಿಯಾಗಲು ಸಾಧ್ಯವಾಗುತ್ತಿದ್ದು, ಇಲಾಖೆ ಅಧಿಕಾರಿಗಳು ಸಭೆಯ ಮಾಹಿತಿಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆದು ಹೇಳಿದರು.

ಬೆಳಗಾವಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಚೇಂಬರ್ ಆಫ್ ಕಾಮರ್ಸ್) ಅಧ್ಯಕ್ಷ ಸಂದೀಪ ಬಾಗೇವಾಡಿ ಮಾತನಾಡಿ, ಬೆಂಗಳೂರು ನಂತರದಲ್ಲಿ ಎರಡನೇ ರಾಜಧಾನಿಯಾಗಿರುವ ಬೆಳಗಾವಿಯಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಹೋಗುತ್ತದೆ ಈ ಹಿನ್ನೆಲೆಯಲ್ಲಿ ಕೈಗಾರಿಕೆ ಸಹಿತ ಅಭಿವೃದ್ಧಿಗೆ ವೇಗ ನೀಡುವ ಅಗತ್ಯವಿದ್ದು, ತ್ಯಾಜ್ಯ ನಿರ್ವಹಣೆ ಮತ್ತು ನಿಯಮಗಳ ಕುರಿತು ಕೈಗಾರಿಕೋದ್ಯಮಿಗಳಲ್ಲಿ
ಮಾಹಿತಿ ಸಹಿತ ಜಾಗೃತಿ ಮೂಡಿಸುವ ಅಗತ್ಯವಿದೆ.
ಈ ಕುರಿತು ನಾವು ಯಶಸ್ವಿಯಾದಲ್ಲಿ ವಿದೇಶಿ ಹೂಡಿಕೆದಾರರನ್ನು ಸೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹೋಟೆಲ್ ಉದ್ದಿಮೆದಾರರ ಸಂಘದ ಅಧ್ಯಕ್ಷ ಸಂಜಯ ಪೈ ಮಾತನಾಡಿದರು. ಮಾಲಿನ್ಯ ನಿಯಂತ್ರಣ ಮಂಡಳಿ ಬೆಳಗಾವಿ ವಿಭಾಗೀಯ ಅಧಿಕಾರಿ ಹಣಮಂತಪ್ಪ ವೇದಿಕೆಯಲ್ಲಿದ್ದರು.

ಪೌರಾಡಳಿತ ನಿರ್ದೇಶನಾಲಯದ ಕಾರ್ಯಪಾಲಕ ಅಭಿಯಂತರ ಭಾನುಮತಿ ಪ್ರಸ್ತಾವಿಕ ಮಾತನಾಡಿದರು.
ಅಧಿಕಾರಿಗಳಾದ ಸುಷ್ಮಾ, ವಿಘ್ನೇಶ್ ಹಾಗೂ ಭಾನುಮತಿ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದರು.
ಸುದೀರ್ಘವಾಗಿ ನಡೆದ ಚರ್ಚೆಯಲ್ಲಿ ಭಾಗೀದಾರರು ಮೌಖಿಕವಾಗಿ, ಲಿಖಿತವಾಗಿ ಮಹತ್ವದ ಸಲಹೆ ಸೂಚನೆಗಳನ್ನು ನೀಡಿದರು.

ಮಹಾನಗರ ಪಾಲಿಕೆ ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರ ಹಣಮಂತ ಕಲಾದಗಿ ಸ್ವಾಗತಿಸಿದರು.
ಬೆಂಗಳೂರು ಪೌರಾಡಳಿತ ಇಲಾಖೆಯ ಅಧಿಕಾರಿಗಳು ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಪರಿಸರ ವಿಭಾಗದ ಅಭಿಯಂತರುಗಳಾದ ಅಶೋಕಕುಮಾರ ಸಜ್ಜನ್, ಆದಿಲ್ ಖಾನ್ ಇತರ ಅಧಿಕಾರಿಗಳು ಬೆಳಗಾವಿ ಹಾಗೂ ಕಲಬುರಗಿ ವಿಭಾಗದ ಭಾಗಿದಾರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *