ಅನಾಥ ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಯುವಕರ ತಂಡ..
ಬೆಳಗಾವಿ : ಪತಿಯನ್ನು ಕಳೆದುಕೊಂಡು ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬರ ಅಂತ್ಯಕ್ರಿಯೆಯನ್ನು ಯುವಕರ ತಂಡವೊಂದು ನೆರವೇರಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ನಗರದ ಟಿಳಕವಾಡಿಯಲ್ಲಿ ಶುಕ್ರವಾರದಂದು ನಡೆದಿದೆ.
ಟಿಳಕವಾಡಿಯ ನಿವಾಸಿಯಾಗಿದ್ದ ಶಕುಂತಲಾ ರಾಮಚಂದ್ರ ಗಡಕರಿ (70) ಮೃತಪಟ್ಟ ದುರ್ಬಲ ಮಹಿಳೆ. ಕಳೆದ ಕೆಲವು ವರ್ಷಗಳಿಂದ ಪತಿಯ ನಿಧನದ ಬಳಿಕ ಇವರು ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾವನಪ್ಪಿದ್ದಾರೆ.

ನೆರವಿಗೆ ಬಾರದ ಬಂಧುಗಳು: ಮಹಿಳೆಯ ನಿಧನದ ಬಳಿಕ ಅವರ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬದವರು ಯಾರೂ ಮುಂದೆ ಬರಲಿಲ್ಲ. ಈ ವಿಷಯ ತಿಳಿದ ಸ್ಥಳೀಯರು ತಕ್ಷಣವೇ ಸ್ಥಳೀಯ ನಾಯಕರು ಹಾಗೂ ಸಮಾಜ ಸೇವಕರಿಗೆ ಮಾಹಿತಿ ನೀಡಿದರು.
ಸ್ಮಶಾನದಲ್ಲಿ ವಿಧಿವಿಧಾನದಂತೆ ಅಂತ್ಯಕ್ರಿಯೆ: ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆ ಸದಸ್ಯ ಶಂಕರ ಪಾಟೀಲ, ಸಮಾಜ ಸೇವಕ ಗಂಗಾಧರ ಪಾಟೀಲ ಹಾಗೂ ಅವರ ಯುವಕರ ತಂಡ ಅಂತ್ಯಕ್ರಿಯೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು. ಮೃತರ ಆತ್ಮಕ್ಕೆ ಶಾಂತಿ ಸಿಗುವಂತೆ ಧಾರ್ಮಿಕ ವಿಧಿವಿಧಾನಗಳ ಮೂಲಕ ನಗರದ ಸದಾಶಿವನಗರದ ಸ್ಮಶಾನದಲ್ಲಿ ಗೌರವಪೂರ್ವಕವಾಗಿ ಅಂತ್ಯಕ್ರಿಯೆ ನೆರವೇರಿಸಿದರು.

ಸಾರ್ವಜನಿಕರ ಮೆಚ್ಚುಗೆ:
ಕಷ್ಟದ ಸಮಯದಲ್ಲಿ ಸ್ಪಂದಿಸಿ ಮಾನವೀಯತೆ ಮೆರೆದ ಶಂಕರ ಪಾಟೀಲ, ಗಂಗಾಧರ ಪಾಟೀಲ ಹಾಗೂ ಅವರ ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ತಂಡವು ಈಗಾಗಲೇ ಹಲವಾರು ಅನಾಥ ಶವಗಳ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ವಿವಿಧ ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.