ಚುರುಕುಗೊಂಡ ದಕ್ಷಿಣ ಕಂದಾಯ ವಿಭಾಗದ ಸಿಬ್ಬಂದಿಗಳ ಕಾರ್ಯ..

ಚುರುಕುಗೊಂಡ ದಕ್ಷಿಣ ಕಂದಾಯ ವಿಭಾಗದ ಸಿಬ್ಬಂದಿಗಳ ಕಾರ್ಯ..

ಕೈಗಾರಿಕಾ ವಾಣಿಜ್ಯ ಆಸ್ತಿಗಳ ಮರುಮಾಪನ ಕಾರ್ಯ..

ಬೆಳಗಾವಿ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೈಗಾರಿಕಾ ಪ್ರದೇಶದ ವಾಣಿಜ್ಯ ಕಟ್ಟಡಗಳಿಂದ ಸರಿಯಾದ ಪ್ರಮಾಣದಲ್ಲಿ ಆಸ್ತಿ ತೆರಿಗೆ ಪಾವತಿ ಆಗಬೇಕೆಂದು ಹಾಗೂ ಪಾಲಿಕೆಯ ಆದಾಯವನ್ನು ದ್ವಿಗುಣಗೊಳಿಸುವ ಹಿನ್ನೆಲೆಯಲ್ಲಿ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಆಸ್ತಿಗಳ ಮರುಮಾಪನ ಹಾಗೂ ತೆರಿಗೆ ಪರಿಶೀಲನೆ ಕಾರ್ಯಕ್ಕಾಗಿ ಫೀಲ್ಡಿಗೆ ಇಳಿದಿದ್ದರು.

ಶುಕ್ರವಾರ ನಗರದ ಉದ್ಯಮಭಾಗ ಪ್ರದೇಶದ, ಖಾನಾಪುರ ರಸ್ತೆಯ, ಕಂದಾಯ ವಾರ್ಡ್ ಸಂಖ್ಯೆ 18ರಲ್ಲಿ ಸುಮಾರು 8000ಆಸ್ತಿಗಳಿದ್ದು, ಅದರಲ್ಲಿ ಕೆಲ ಕೈಗಾರಿಕಾ ವಾಣಿಜ್ಯ ಕಟ್ಟಡಗಳಿಗೆ ಪಾಲಿಕೆಯ ದಕ್ಷಿಣ ಕಂದಾಯ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಕಟ್ಟಡಗಳ ಮರುಮಾಪನ ನಡೆಸಿದರು.

ತೆರಿಗೆ ವ್ಯಾಪ್ತಿಗೆ ಒಳಪಟ್ಟ, ತೆರಿಗೆ ವ್ಯಾಪ್ತಿಗೆ ಒಳಪಡದ ಕಟ್ಟಡಗಳನ್ನು ಗುರುತಿಸಿ ಪರಿಶೀಲನೆ ನಡೆಸಲಾಗಿದ್ದು ,
ದಕ್ಷಿಣ ಕಂದಾಯ ವಲಯ ಆಯುಕ್ತರ ನೇತೃತ್ವದಲ್ಲಿ ಎರಡು ತಂಡಗಳಾಗಿ, ಸುಮಾರು ಹತ್ತು ಕೈಗಾರಿಕಾ ಕಟ್ಟಡಗಳ ಮರುಮಾಪನ ಹಾಗೂ ತೆರಿಗೆ ನಿರ್ಧರಣೆಯ ಪರಿಶೀಲನೆ ನಡೆಸಲಾಯಿತು. ಕಟ್ಟಡದ ವಿಸ್ತೀರ್ಣ, ಬಳಕೆ ಹಾಗೂ ತೆರಿಗೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಪರಿಷ್ಕೃತ ತೆರಿಗೆ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಮಾಹಿತಿ ನೀಡಿದರು.

ಪಾಲಿಕೆಯ ಆಯುಕ್ತರ ಆದೇಶದ ಮೇರೆಗೆ, ಕಂದಾಯ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ದಕ್ಷಿಣ ಕಂದಾಯ ವಲಯ ಆಯುಕ್ತರ ಕಚೇರಿಯಿಂದ ಶುಕ್ರವಾರ ಆಸ್ತಿ ಮರುಮಾಪನ ಕಾರ್ಯ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ದಕ್ಷಿಣ ವಲಯ ಕಂದಾಯ ವಿಭಾಗದ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಈ ಕಾರ್ಯ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದಕ್ಷಿಣದ ವಲಯ ಆಯುಕ್ತರ ಕಚೇರಿಯ ವಲಯ ಆಯುಕ್ತರು, ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು, ಕರ ವಸೂಲಿಗಾರರು ಸೇರಿದಂತೆ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *