ಬೆಳಗಾವಿ ವಿಭಾಗದಲ್ಲಿ ಮಳೆಗಾಲ ಮುಗಿಯುವವರೆಗೆ ಮರ ಕಡಿತಲೆಗೆ ತಾತ್ಕಾಲಿಕ ತಡೆ..

ಬೆಳಗಾವಿ ವಿಭಾಗದಲ್ಲಿ ಮಳೆಗಾಲ ಮುಗಿಯುವವರೆಗೆ ಮರ ಕಡಿತಲೆಗೆ ತಾತ್ಕಾಲಿಕ ತಡೆ..

ಬೆಳಗಾವಿ : ಬೆಳಗಾವಿ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಮಳೆಗಾಲದ ಹಿನ್ನೆಲೆಯಲ್ಲಿ ಮಾಲ್ಕಿ ಪ್ರದೇಶಗಳಲ್ಲಿನ ಮರಗಳ ಕಡಿತಲೆಯನ್ನು ತಾತ್ಕಾಲಿಕವಾಗಿ ತಡೆಹಿಡಿದು ಅರಣ್ಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
​ಜೂನ್ 15 ರಿಂದ ಅಕ್ಟೋಬರ್ 31 ರ ವರೆಗೆ ಮರಗಳ ಕಡಿತಲೆಗೆ ನೀಡಲಾಗುವ ಅನುಮತಿಯನ್ನು ಅಮಾನತಿನಲ್ಲಿಡಲಾಗಿದೆ.

ಮಳೆಗಾಲದಲ್ಲಿ ಮರಗಳನ್ನು ಕತ್ತರಿಸುವುದು ಮತ್ತು ಸಾಗಾಣಿಕೆ ಮಾಡುವುದರಿಂದ ಸ್ವಾಭಾವಿಕ ಬೀಜೋತ್ಪತ್ತಿ, ಬೀಜಗಳ ಮೊಳಕೆ ಒಡೆಯುವಿಕೆ ಹಾಗೂ ಹೊಸ ಸಸ್ಯಗಳ ಬೆಳವಣಿಗೆಗೆ ಧಕ್ಕೆಯುಂಟಾಗುತ್ತದೆ.
ಜೊತೆಗೆ ಭೂಸವಕಳಿ ಹೆಚ್ಚಾಗಿ, ರಸ್ತೆಗಳೂ ಹಾಳಾಗುವ ಸಾಧ್ಯತೆ ಇರುತ್ತದೆ ಎಂದು ಇಲಾಖೆ ತಿಳಿಸಿದೆ.
​ಅಲ್ಲದೆ, ಪ್ರಸ್ತುತ ಮಳೆಗಾಲ ಪ್ರಾರಂಭವಾಗಿರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪೂರ್ಣಪ್ರಮಾಣದಲ್ಲಿ ನೆಡುತೋಪು (ಸಸಿ ನೆಡುವ) ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಹೀಗಾಗಿ ಮಾಲ್ಕಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಲು ಅಡಚಣೆಯಾಗಲಿದೆ.

ಈ ಎಲ್ಲಾ ಕಾರಣಗಳಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸಾರ್ವಜನಿಕರು, ಜಮೀನಿನ ಮಾಲೀಕರು ಹಾಗೂ ಅರಣ್ಯ ಗುತ್ತಿಗೆದಾರರು ಇಲಾಖೆಯೊಂದಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

​ಅಪಾಯಕಾರಿ ಮರಗಳಿಗೆ ವಿನಾಯಿತಿ:

ಮಳೆ, ಗಾಳಿ ಹಾಗೂ ಇತರೆ ನೈಸರ್ಗಿಕ ವಿಕೋಪಗಳಿಂದ ಸಾರ್ವಜನಿಕರ ಜೀವಕ್ಕೆ ಅಥವಾ ಆಸ್ತಿಪಾಸ್ತಿಗಳಿಗೆ ಅಪಾಯವನ್ನುಂಟು ಮಾಡುವ ಸ್ಥಿತಿಯಲ್ಲಿರುವ ಮರಗಳ ಕಡಿತಲೆಗೆ ಈ ನಿಷೇಧ ಅನ್ವಯಿಸುವುದಿಲ್ಲ ಎಂದು ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಜೆ. ಕ್ರಾಂತಿ ಅವರು ಸ್ಪಷ್ಟಪಡಿಸಿದ್ದಾರೆ.

​ಈ ಕುರಿತು ಬೆಳಗಾವಿ, ಖಾನಾಪುರ, ನಾಗರಗಾಳಿ ಸೇರಿದಂತೆ ವಿಭಾಗದ ಎಲ್ಲಾ ವಲಯ ಅರಣ್ಯಾಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *