ರಾಜ್ಯ ಸರ್ಕಾರದ ಶಾಶ್ವತ ನಿವಾಸ ಪ್ರಮಾಣಪತ್ರ ಅಧಿಸೂಚನೆ ಸಂವಿಧಾನದ ವಿರುದ್ಧವಾಗಿದೆ..
ರಾಷ್ಟ್ರೀಯ ಭದ್ರತೆಗೆ ಮಾರಕವಾದ ಕಾರ್ಯ…
ಬೆಳಗಾವಿ ಬಿಜೆಪಿಯಿಂದ ಖಂಡನೆ..
ಬೆಳಗಾವಿ : ಕರ್ನಾಟಕ ಸರ್ಕಾರ ಹೊರಡಿಸಿರುವ ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್ಸಿ)-2026 ಅಧಿಸೂಚನೆಯು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದ್ದು, ರಾಷ್ಟ್ರೀಯ ಭದ್ರತೆಗೆ ಗಂಭೀರ ಆತಂಕ ಉಂಟುಮಾಡುವ ಸಾಧ್ಯತೆಯಿದೆ ಎಂದು ಬಿಜೆಪಿ ಮುಖಂಡ ಎಂ.ಬಿ. ಜಿರಲಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನವು ದೇಶದ ಎಲ್ಲ ನಾಗರಿಕರಿಗೆ ಒಂದೇ ಪೌರತ್ವವನ್ನು ಕಲ್ಪಿಸಿದ್ದು, ರಾಜ್ಯ ಸರ್ಕಾರವು “ಶಾಶ್ವತ ನಿವಾಸಿ” ಎಂಬ ಪ್ರತ್ಯೇಕ ವರ್ಗವನ್ನು ಸೃಷ್ಟಿಸಲು ಯಾವುದೇ ಸಾಂವಿಧಾನಿಕ ಅಥವಾ ಕಾನೂನುಬದ್ಧ ಅಧಿಕಾರ ಹೊಂದಿಲ್ಲ ಎಂದು ಹೇಳಿದರು. ಇಂತಹ ವರ್ಗೀಕರಣವು ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದ್ದು, 14ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂದರು.

ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಮೂಲಕ “ಶಾಶ್ವತ ನಿವಾಸಿ” ಎಂಬ ಹೆಸರಿನಲ್ಲಿ ಹೊಸ ಕಾನೂನು ಮಾನ್ಯತೆ ನೀಡುವ ಪ್ರಯತ್ನ ನಡೆದಿದೆ. ಆದರೆ, ಇದಕ್ಕೆ ಸಂವಿಧಾನದಲ್ಲಿ ಯಾವುದೇ ಅವಕಾಶವಿಲ್ಲ. ಹೀಗಾಗಿ ಈ ಅಧಿಸೂಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಕೇಂದ್ರ ಸರ್ಕಾರ ಪರಿಶೀಲಿಸಬೇಕಾಗಿದೆ ಎಂದು ಅವರು ಆಗ್ರಹಿಸಿದರು.
ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ಭಾರತೀಯ ಪೌರತ್ವವನ್ನು ಸಮರ್ಥ ಕೇಂದ್ರ ಸಂಸ್ಥೆಗಳ ಮೂಲಕ ಕಡ್ಡಾಯವಾಗಿ ಪರಿಶೀಲಿಸುವ ಯಾವುದೇ ವ್ಯವಸ್ಥೆ ಇಲ್ಲ. ಕೇವಲ ಕಂದಾಯ ಅಧಿಕಾರಿಗಳ ನಿವಾಸ ಮತ್ತು ಸ್ಥಳೀಯ ಪರಿಶೀಲನೆ ಆಧರಿಸಿ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ರೂಪಿಸಲಾಗಿದೆ. ಇದರಿಂದ ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದವರು ಅಥವಾ ರಾಜ್ಯದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ಸ್ಥಳೀಯ ದಾಖಲೆಗಳು ಅಥವಾ ನಕಲಿ ದಾಖಲೆಗಳ ಮೂಲಕ ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯುವ ಅಪಾಯವಿದೆ ಎಂದು ಜಿರಲಿ ಹೇಳಿದರು.
ಒಮ್ಮೆ ಈ ಪ್ರಮಾಣಪತ್ರ ಪಡೆದ ನಂತರ ಸರ್ಕಾರಿ ದಾಖಲೆಗಳು, ವಿವಿಧ ಕಲ್ಯಾಣ ಯೋಜನೆಗಳು, ಶೈಕ್ಷಣಿಕ ಪ್ರವೇಶ, ಸರ್ಕಾರಿ ಉದ್ಯೋಗ ಹಾಗೂ ಇತರ ಸೌಲಭ್ಯಗಳನ್ನು ಪಡೆಯಲು ಅದನ್ನು ಬಳಸುವ ಸಾಧ್ಯತೆ ಇದೆ. ಇದರಿಂದ ಅಕ್ರಮ ನಿವಾಸವನ್ನೇ ಕಾನೂನುಬದ್ಧಗೊಳಿಸಿದಂತಾಗುತ್ತದೆ. ಜೊತೆಗೆ ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ದೇಶದಿಂದ ಹೊರಹಾಕುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೂ ಧಕ್ಕೆ ಉಂಟಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪೌರತ್ವ, ವಿದೇಶಿಯರು, ವಲಸೆ ಹಾಗೂ ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳು ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರದ ವಿಶೇಷ ಅಧಿಕಾರ ವ್ಯಾಪ್ತಿಗೆ ಸೇರಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ಪ್ರತ್ಯೇಕ ಶಾಶ್ವತ ನಿವಾಸ ಪ್ರಮಾಣಪತ್ರ ವ್ಯವಸ್ಥೆ ಜಾರಿಗೊಳಿಸುವುದು ಕೇಂದ್ರದ ಏಕರೂಪದ ನೀತಿಗೆ ವಿರುದ್ಧವಾಗಿದ್ದು, ರಾಷ್ಟ್ರೀಯ ಭದ್ರತೆಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್ಸಿ)-2026 ಅಧಿಸೂಚನೆಯ ಸಾಂವಿಧಾನಿಕ ಮತ್ತು ಕಾನೂನುಬದ್ಧ ಸಿಂಧುತ್ವವನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವಾಲಯ ಸಮರ್ಥ ಅಧಿಕಾರಿಯನ್ನು ನೇಮಿಸಬೇಕು. ಪರಿಶೀಲನೆ ಪೂರ್ಣಗೊಳ್ಳುವವರೆಗೆ ಅಧಿಸೂಚನೆಯ ಅನುಷ್ಠಾನವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಅಧಿಸೂಚನೆ ಹೊರಡಿಸಲು ಬಳಸಿರುವ ಸಾಂವಿಧಾನಿಕ ಹಾಗೂ ಶಾಸನಬದ್ಧ ಅಧಿಕಾರದ ಕುರಿತು ರಾಜ್ಯ ಸರ್ಕಾರದಿಂದ ವಿವರವಾದ ವರದಿ ಪಡೆಯಬೇಕು. ಭಾರತೀಯ ಪೌರತ್ವದ ಸಮಗ್ರ ಪರಿಶೀಲನೆಯಿಲ್ಲದೆ ಯಾವುದೇ ಶಾಶ್ವತ ನಿವಾಸ ಪ್ರಮಾಣಪತ್ರ ನೀಡದಂತೆ ಕೇಂದ್ರ ಸರ್ಕಾರ ಅಗತ್ಯ ನಿರ್ದೇಶನ ನೀಡಬೇಕು. ರಾಷ್ಟ್ರೀಯ ಭದ್ರತೆ, ಸಂವಿಧಾನದ ಚೌಕಟ್ಟು ಹಾಗೂ ಸಮಾನತೆಯ ತತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಎಂ.ಬಿ. ಜಿರಲಿ ಆಗ್ರಹಿಸಿದರು.
ಸುದ್ದಿಗೊಷ್ಟಿಯಲ್ಲಿ ಬಿಜೆಪಿಯ ಬೆಳಗಾವಿ ನಗರ ಜಿಲ್ಲಾ ಅಧ್ಯಕ್ಷೆಯಾದ ಗೀತಾ ಸುತಾರ, ಮಾಜಿ ಶಾಸಕರುಗಳಾದ ಅನಿಲ್ ಬೆನಕೆ ಹಾಗೂ ಸಂಜಯ ಪಾಟೀಲ್, ಉಪ ಮಹಾಪೌರರಾದ ಹನಮಂತ ಕೊಂಗಾಲಿ, ರಮೇಶ ದೇಶಪಾಂಡೆ, ಉಜ್ವಲಾ ಬಡವನಾಚೆ ಮತ್ತಿತರರು ಉಪಸ್ಥಿತರಿದ್ದರು..