ರೈತ ದೇಶದ ಬೆನ್ನೆಲುಬು ಮಾತ್ರವಲ್ಲ, ದೇಶದ ದೇವರು.
ನಿಜಗುಣಾನಂದ ಸ್ವಾಮೀಜಿ..
ಬೆಳಗಾವಿ : ನಿಮ್ಮ ನಿಮ್ಮ ಕಾರ್ಯಸಾಧನೆಗಾಗಿ ನೀವು ಯಾವ್ಯಾವುದೋ ದೇವರುಗಳ ಪೂಜೆ ಮಾಡುವ ಬದಲು ರೈತರ ಬೇಡಿಕೆ ಈಡೇರಿಸಿ ಸಾಕು ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.
ಹಿರೇಬಾಗೇವಾಡಿ ಟೋಲ್ನಾಕಾ ಬಳಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ಬುಧವಾರ ಲಿಂಗಾಯತ ಮಠಾಧೀಶರ ಪರವಾಗಿ ಬೆಂಬಲ ಸೂಚಿಸಿ ಮಾತನಾಡಿದ ಅವರು, ಬಸವಣ್ಣನವರು ಶತಮಾನಗಳ ಹಿಂದೆಯೇ ರೈತನ ಮಹತ್ವವನ್ನು ಸಾರಿದ್ದಾರೆ. ಕೃಷಿ ಕಾಯಕ ಮಾಡುವ ಸದ್ಭಕ್ತನ ಪಾದವನ್ನು ತೋರಿಸಿ ಬದುಕಿಸಯ್ಯ ಎಂದು ಬಸವಣ್ಣನವರು ಹೇಳಿರುವುದು ರೈತನ ತನು, ಮನ ಮತ್ತು ಭಾವದ ಶುದ್ಧತೆಯನ್ನು ಪ್ರತಿಬಿಂಬಿಸುತ್ತದೆ. ರೈತನ ಬದುಕು ದುಡಿಮೆಯ ಮೇಲೆ ನಿಂತಿದ್ದು, ಆತನಲ್ಲಿ ಮೋಸ, ವಂಚನೆಗೆ ಅವಕಾಶವಿಲ್ಲ ಎಂದರು.
ರೈತರ ಹಕ್ಕು ಮತ್ತು ಬದುಕಿಗಾಗಿ ನಡೆಯುತ್ತಿರುವ ಹೋರಾಟವನ್ನು ಸರ್ಕಾರಗಳು ನಿರ್ಲಕ್ಷಿಸಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಕುವೆಂಪು ಅವರು ಕೂಡ ‘ಉಳುವ ಯೋಗಿಯ ನೋಡಲ್ಲಿ ಎಂದು ರೈತನನ್ನು ಕೊಂಡಾಡಿದ್ದಾರೆ. ನಿಜವಾದ ಯೋಗಿ, ಮಹಾತ್ಮನನ್ನು ಹುಡುಕಬೇಕಾದರೆ ರೈತನ ಬದುಕು ಮತ್ತು ಕಾಯಕವನ್ನು ನೋಡಬೇಕು. ರೈತ ತಾನು ಬೆಳೆದ ಬೆಳೆಯನ್ನು ತನ್ನ ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸುವುದಿಲ್ಲ. ಧಾರ್ಮಿಕ ಆಚರಣೆ, ಮಠ-ಮಂದಿರ, ಕೂಲಿ ಕಾರ್ಮಿಕರು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಗೂ ಉತ್ಪನ್ನವನ್ನು ಹಂಚಿಕೊಳ್ಳುತ್ತಾನೆ. ಕೊನೆಯಲ್ಲಿ ಉಳಿದಿದ್ದನ್ನು ಮಾರಾಟ ಮಾಡಿ ತನ್ನ ಬದುಕು ಕಟ್ಟಿಕೊಳ್ಳುತ್ತಾನೆ. ಇಂತಹ ರೈತನ ಬದುಕಿನ ಕುರಿತು ದೇಶದಲ್ಲಿ ಗಂಭೀರ ಚಿಂತನೆ ನಡೆಯಬೇಕಿದೆ ಎಂದು ಹೇಳಿದರು.
ರೈತರ ಮನೆಗೆ ದರೋಡೆಕೋರರು ಬಂದರೂ ಅವರಿಗೆ ಸಿಗುವುದು ಒಂದಿಷ್ಟು ಜೋಳ ಅಥವಾ ಭತ್ತ ಮಾತ್ರ. ರೈತನ ಬದುಕಿನಲ್ಲಿ ಸಂಪತ್ತಿನ ಸಂಗ್ರಹವಿಲ್ಲ. ದುಡಿದು ಬದುಕುವುದು, ದುಡಿಮೆಯ ಫಲವನ್ನು ಸಮಾಜದೊಂದಿಗೆ ಹಂಚಿಕೊಳ್ಳುವುದು ಆತನ ಸ್ವಭಾವ. ಹೀಗಿರುವ ರೈತರನ್ನು ಇಂದು ಸಾಲಗಾರರನ್ನಾಗಿ ಮಾಡಿರುವ ವ್ಯವಸ್ಥೆಯನ್ನು ಪ್ರಶ್ನಿಸಬೇಕಿದೆ ಎಂದರು.
ರೈತ ಚಳವಳಿಯ ಇತಿಹಾಸ ತಿಳಿಯಿರಿ
ಕರ್ನಾಟಕದ ರೈತರ ಹೋರಾಟ ಸಾಮಾನ್ಯ ಹೋರಾಟವಲ್ಲ. ದೇಶದ ಭವಿಷ್ಯವನ್ನೇ ಬದಲಿಸುವ ಶಕ್ತಿ ಈ ಹೋರಾಟಕ್ಕಿದೆ. ಕರ್ನಾಟಕದ ರೈತರು ಪ್ರಗತಿಪರ ಚಿಂತನೆ ಹಾಗೂ ಸದೃಢ ಮನಸ್ಸು ಹೊಂದಿದ್ದಾರೆ. ರೈತರ ಹೋರಾಟದ ಇತಿಹಾಸವನ್ನು ಯುವಕರು ಅಧ್ಯಯನ ಮಾಡಬೇಕು. ರೈತ ಚಳವಳಿಯ ಇತಿಹಾಸ ತಿಳಿದುಕೊಳ್ಳಲು ಪ್ರೊ. ನಂಜುಂಡಸ್ವಾಮಿ ಅವರ ಬರಹಗಳನ್ನು ಓದಬೇಕು ಎಂದು ಸಲಹೆ ನೀಡಿದರು.
ನಿಮ್ಮ ಬದುಕು ನಿಮ್ಮ ಹೊಲದ ಮೇಲೆ, ನಿಮ್ಮ ಬದುಕು ನಿಮ್ಮ ಬೀಜದ ಮೇಲೆ ಎಂಬುದನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಯಾರ ಮಾತಿನ ಮೇಲೂ ಸಂಪೂರ್ಣ ಅವಲಂಬಿತರಾಗದೆ ತಮ್ಮ ಹಕ್ಕು ಮತ್ತು ಬದುಕಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ರೈತರ ಹೋರಾಟಕ್ಕೆ ಪ್ರತಿಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಸ್ಪಷ್ಟ ಉತ್ತರ ನೀಡಬೇಕು. ಹೋರಾಟಕ್ಕೆ ನ್ಯಾಯಯುತ ಪರಿಹಾರ ದೊರಕಿಸುವುದು ಸರ್ಕಾರಗಳ ಕರ್ತವ್ಯ ಎಂದು ಹೇಳಿದರು.
ಹೆದ್ದಾರಿ ಬಳಿ ಕುಳಿತು ಹೋರಾಟ ನಡೆಸುತ್ತಿರುವ ರೈತರು ಸಾರ್ವಜನಿಕರಿಗೆ ತೊಂದರೆ ನೀಡುವ ಉದ್ದೇಶ ಹೊಂದಿಲ್ಲ. ರೈತರು ಶ್ರೀಮಂತರಲ್ಲ; ಬಹುತೇಕ ರೈತರು ಸಾಲದ ಹೊರೆ ಹೊತ್ತಿದ್ದಾರೆ. ಕೃಷಿ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ರೈತರ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ದೊರಕಬೇಕು. ರೈತರ ಸಂಕಷ್ಟವನ್ನು ಸರ್ಕಾರಗಳು ಅರ್ಥ ಮಾಡಿಕೊಂಡು ಹೋರಾಟ ಅಂತ್ಯಗೊಳ್ಳುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಿಜಗುಣಾನಂದ ಸ್ವಾಮೀಜಿ ಒತ್ತಾಯಿಸಿದರು.
ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಕೂಡ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.