ರೈತರ ಬೇಡಿಕೆಗಾಗಿ ಎರಡನೇ ದಿನವೂ ಮುಂದುವರೆದ ಹೋರಾಟ..

ರೈತರ ಬೇಡಿಕೆಗಾಗಿ ಎರಡನೇ ದಿನವೂ ಮುಂದುವರೆದ ಹೋರಾಟ..

ಬೆಳಗಾವಿ : ಕಬ್ಬಿಗೆ ಸೂಕ್ತ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ. ಹತ್ತರಗಿ ಟೋಲ್‌ಗೇಟ್‌ ಬಳಿ ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ, ಎಂಎಸ್‌ಪಿ ದರವನ್ನು ₹60ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇಂದೂ ಲಕ್ಷಾಂತರ ರೈತರು ಹೋರಾಟ ನಡೆಸುತ್ತಿದ್ದಾರೆ. ಎಂಎಸ್‌ಪಿ ದರ ಹೆಚ್ಚಳವಾಗಲೇಬೇಕು ಎಂದು ಆಗ್ರಹಿಸಿದರು.

ಪ್ರಲ್ಲಾದ್ ಜೋಶಿ ವಿರುದ್ಧದ ಹೋರಾಟವಲ್ಲ
ನಮ್ಮ ಹೋರಾಟ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಅವರ ವಿರುದ್ಧವಲ್ಲ. ಅವರ ಕೈಕಾಲು ಹಿಡಿದರೂ ಎಂಎಸ್‌ಪಿ ದರ ಹೆಚ್ಚಳವಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಎಂಎಸ್‌ಪಿ ದರ ಹೆಚ್ಚಳದ ಕುರಿತು ಪ್ರಲ್ಲಾದ್ ಜೋಶಿ ಚರ್ಚಿಸಿದ್ದಾರೆ ಎಂಬ ವಿಚಾರ ಕೇಳಿ ಸಂತೋಷವಾಗಿದೆ ಎಂದು ಹೇಳಿದರು.

ಎಂಎಸ್‌ಪಿ ದರವನ್ನು ₹60ಕ್ಕೆ ಹೆಚ್ಚಿಸುವುದು, ಸ್ವಾಮಿನಾಥನ್ ವರದಿ ಜಾರಿಗೊಳಿಸುವುದು ಹಾಗೂ ಎಥೆನಾಲ್ ಸಂಪೂರ್ಣವಾಗಿ ಖರೀದಿಸುವ ಭರವಸೆ ನೀಡಬೇಕು. ಹಾಗಾದರೆ ಈಗಲೇ ಹೋರಾಟ ಕೈಬಿಡುತ್ತೇವೆ ಎಂದರು.

ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಪಾದಯಾತ್ರೆ ನಡೆಸುವ ಕುರಿತು ಚಿಂತನೆ ಮಾಡಲಾಗುತ್ತಿದೆ. ಈಗಾಗಲೇ ಹಲವು ಜಿಲ್ಲೆಗಳ ರೈತರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ನಾವು ಹೋರಾಟ ಕೈಬಿಟ್ಟು ಹೋಗುವವರಲ್ಲ. ರೈತರಿಗೆ ದಯವಿಟ್ಟು ಮೋಸ ಮಾಡಬೇಡಿ ಎಂದು ಚೂನಪ್ಪ ಪೂಜಾರಿ ಹೇಳಿದರು.

Leave a Reply

Your email address will not be published. Required fields are marked *