25 ವರ್ಷಗಳ ಆಸ್ತಿ ವಿವಾದವನ್ನು ಕೇವಲ 25 ನಿಮಿಷಗಳಲ್ಲಿ ಪರಿಹರಿಸಿದ ಜಿಲ್ಲಾಧಿಕಾರಿ..
ಎರಡೂ ಬಣಗಳ ಮೊಗದಲ್ಲಿ ಮಂದಹಾಸ ಮೂಡಿಸಿದ ಡಿಸಿಯವರ ನಿರ್ಧಾರ..
ಬೆಳಗಾವಿ : ಸುಮಾರು 25 ವರ್ಷಗಳಿಗಿಂತ ಅಧಿಕ ಕಾಲಮಾನದ ಜಮೀನು ವ್ಯಾಜ್ಯವನ್ನು ತಮ್ಮ ಜಾಣ ಬುದ್ದಿಯ ಆಡಳಿತದಿಂದ ಕೇವಲ 25 ನಿಮಿಷಗಳಲ್ಲಿ ಇಬ್ಬರಿಗೂ ಅನುಕೂಲ ಆಗುವಂತಹ ಒಂದು ಉತ್ತಮವಾದ ನಿರ್ಧಾರ ಕೈಗೊಂಡು ಬಹುದೊಡ್ಡ ಸಮಸ್ಯೆಗೆ ಸುಖಾoತ್ಯವನ್ನು ನೀಡಿದ್ದಾರೆ.
ಶುಕ್ರವಾರ ದಿನಾಂಕ 06/03/2026 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಸಿಯವರ ನೇತೃತ್ವದಲ್ಲಿ ಜರುಗಿದ ಆಸ್ತಿ ವಿವಾದದ ಸಭೆಯಲ್ಲಿ, ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದ ಸುಮಾರು10 ಎಕರೆ 31 ಗುಂಟೆ ಜಮೀನಿನ ವ್ಯಾಜ್ಯದ ಚರ್ಚೆ ನಡೆದಿದ್ದು, ಜಮೀನಿನ ರೈತರಾದ ಸಂತಿ ಬಸ್ತವಾಡಿನ ನಾಯಕ ಸಮುದಾಯದ ಜನರ ಪರವಾಗಿ ಆಗಮಿಸಿದ ಪ್ರಮುಖರ ಅಭಿಪ್ರಾಯವನ್ನು ಸಂಗ್ರಹಿಸಿ, ಇತ್ತ ಉಚ್ಚ ನ್ಯಾಯಾಲಯದ ಆದೇಶ ತಂದಿರುವ ಚಂದರಗಿ ಕ್ರೀಡಾ ಶಿಕ್ಷಣ ಸಂಸ್ಥೆಯ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿದ ಜಿಲ್ಲಾಧಿಕಾರಿಗಳು ಕೊನೆಯಲ್ಲಿ ಇಬ್ಬರಿಗೂ ಸೂಕ್ತವಾಗುವ ಉತ್ತಮ ನಿರ್ಣಯವನ್ನು ನೀಡಿದ್ದಾರೆ.
ಎರಡೂ ಕಡೆಯ ಅಭಿಪ್ರಾಯಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಕ್ರೀಡಾ ಶಿಕ್ಷಣ ಸಂಸ್ಥೆಯವರಾದ ನೀವು ತಮ್ಮ ಪರವಾದ ಉಚ್ಚ ನ್ಯಾಯಾಲಯದ ಆದೇಶವನ್ನು ತಂದಿರುವಿರಿ ಆದರೆ ಅಂಕಲಗಿ ಕುಟುಂಬದವರು ಬಹುದಿನಗಳಿಂದ ಅಲ್ಲಿ ವ್ಯವಸಾಯ ಮಾಡಿಕೊಂಡು ಉಪಜೀವನಕ್ಕಾಗಿ ಅದನ್ನೇ ಅವಲಂಬಿಸಿಕೊಂಡು ಬಂದಿದ್ದಾರೆ, ಈಗಾಗಲೇ ಹಲವಾರು ವರ್ಷಗಳಿಂದ ಈ ವ್ಯಾಜ್ಯ ನಡೆಯುತ್ತಲೇ ಬಂದಿದೆ, ಇದು ಮುಂದುವರೆಯಬಾರದು, ನೀವು ಅದೇ ಗ್ರಾಮದಲ್ಲಿ ಕ್ರೀಡಾ ಶಾಲೆ ಮಾಡುತ್ತಿರುವದಿಂದ ಆ ಗ್ರಾಮದ ಜನರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು..
ಈಗಿರುವ 10 ಎಕರೆ 31 ಗುಂಟೆಯಲ್ಲಿ 2.5 ಎಕರೆ ಜಮೀನನ್ನು ಆ ಅಂಕಲಗಿ ಕುಟುಂಬದವರಿಗೆ ಬಿಟ್ಟು ಕೊಡಿ, ಆ ಎರಡೂವರೆ ಎಕರೆ ಜಮೀನಿನ ಬದಲಾಗಿ 4 ಎಕರೆ ಜಮೀನನ್ನು ಬೇರೆ ಕಡೆಗೆ ನಾವು ನಿಮಗೆ ವ್ಯವಸ್ಥೆ ಮಾಡಿ ಕೊಡುತ್ತೇವೆ, ಉಳಿದ ಎಂಟು ಎಕರೆ ನೀವು ಎಲ್ಲಿ ಬೇಡುತ್ತಿರೋ, ಎಲ್ಲಿ ನಿಮಗೆ ಅನುಕೂಲ ಆಗುತ್ತದೆಯೋ ಅಲ್ಲಿ ನಿಮ್ಮ ಶಾಲೆಯನ್ನು ನಿರ್ಮಿಸಿಕೊಳ್ಳಿ, ಇದರಿಂದ ಇಬ್ಬರಿಗೂ ಅನುಕೂಲ ಆಗುತ್ತದೆ ಎಂಬ ಸಲಹೆ ನೀಡಿದರು.
ಆಗ ಕ್ರೀಡಾ ಶಾಲಾ ಸಂಸ್ಥೆಯವರು ನಮಗೆ ಅಲ್ಲಿ ಸ್ವಲ್ಪ ಇಲ್ಲಿ ಸ್ವಲ್ಪ ಬೇಡ, ಬೇರೆ ಸ್ಥಳದಲ್ಲಿಯೇ ನಮಗೆ ಪೂರ್ತಿ ಸುಮಾರು ಹನ್ನೊಂದು ಎಕರೆ ನೀಡಿರಿ, ಆ ಕಡೆ ಈ ಕಡೆ ಅಂದರೆ ಸಂಚಾರಕ್ಕೆ ನಮಗೆ ತೊಂದರೆ ಆಗುತ್ತದೆ ಎಂದಾಗ, ಇದು ಜಿಲ್ಲಾಧಿಕಾರಿ ಕಚೇರಿಯಿಂದ ಆದ (ಗ್ರಾಂಟ್) ಅನುದಾನದ ಜಮೀನು, ಇದನ್ನು ಹಿಂಪಡೆಯುವ ಹಾದಿಯೂ ಜಿಲ್ಲಾಡಳಿತಕ್ಕೆ ಗೊತ್ತಿದೆ, ಎಲ್ಲರಿಗೂ ಒಳ್ಳೆಯದು ಆಗಲೆಂದು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ, ವಿಚಾರಿಸಿ, ತಮ್ಮ ಕ್ರೀಡಾ ಶಾಲೆ ನಿರ್ಮಾಣಕ್ಕೆ ಯಾವುದೇ ತೊಂದರೆ ಆಗದು, ಗ್ರಾಮದ ಜನತೆಗೂ ನಾನು ತಿಳಿಸಿ ಹೇಳುವೆ, ನಿಮ್ಮ ಸಂಸ್ಥೆಯ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಐದು ದಿನಗಳ ಒಳಗಾಗಿ ನನಗೆ ತಿಳಿಸಬೇಕು ಎಂದರು.
ನಂತರ ಎಲ್ಲರೂ ಒಂದಾಗಿ ಚರ್ಚೆ ಮಾಡುವದು, ಜಿಲ್ಲಾಧಿಕಾರಿಗಳು ಪ್ರಶ್ನೆಗಳಿಗೆ ಉತ್ತರಿಸಿ ಅವರಿಗೆ ತಿಳಿಸುವದನ್ನು ನೋಡಿದರೆ ಜಿಲ್ಲಾಧಿಕಾರಿಗಳ ಸಂಧಾನ ಸಭೆ ಯಶಸ್ವಿ ಆದಂತೆ ಗೋಚರಿಸಿತ್ತು, ಕೊನೆಯಲ್ಲಿ ಎರಡೂ ಕಡೆಯಿಂದ ಬಂದ ಸದಸ್ಯರು ಜಿಲ್ಲಾಧಿಕಾರಿಗಳ ಉತ್ತಮ ನಿರ್ಧಾರಕ್ಕೆತಮ್ಮ ಧನ್ಯವಾದಗಳನ್ನು ತಿಳಿಸಿದರು..
ಈ ಸಭೆಯಲ್ಲಿ ದಲಿತ ಮುಖಂಡರಾದ ಸಿದ್ದಪ್ಪ ಕಾಂಬಳೆ, ಶೇಖರ್ ಕಾಗೇರಿ, ಸುರೇಶ ಗವಣ್ಣವರ, ಬಾವುಕಣ್ಣ ಬಂಗ್ಯಾಗೋಳ, ಕುಶಪ್ಪ ನಾಯಕ, ಸಂತೋಷ್ ಚಿಕ್ಕಲದಿನ್ನಿ, ವಿಠ್ಠಲ್ ಅಂಕಲಗಿ, ರವಿ ಕಾಂಬ್ಳೆ, ಬಸ್ತವಾಡ ಗ್ರಾಮದ ಅಂಕಲಗಿ ಕುಟುಂಬದವರು, ಚಂದರಗಿ ಕ್ರೀಡಾ ಶಾಲೆಯ ಸಮಿತಿ ಸದಸ್ಯರು ಇದ್ದರು.
ವರದಿ ಪ್ರಕಾಶ ಬಿ ಕೆ..