ನಿಯಮ ಬಾಹಿರ ಕಟ್ಟಡದ ವಿರುದ್ಧ ಕ್ರಮ ಜರುಗಿಸದ ಪಾಲಿಕೆಯ ಪಿಡಬ್ಲ್ಯೂಡಿ ವಿಭಾಗ..
ದಾಖಲೆ ಪಡೆಯುವ ಗಡುವು ಮೀರಿದರೂ ಕೈಕಟ್ಟಿ ಕುಳಿತ ಇಂಜಿನಿಯರಗಳು..
ಪಾಲಿಕೆ ನಿಯಮಗಳಿಗೆ ಕೇರ್ ಮಾಡದೇ ಕಟ್ಟಡ ಪೂರ್ಣಗೊಳಿಸುತ್ತಿರುವ ಬಿಲ್ಡರ್..
ಬೆಳಗಾವಿ : ನೆಹರು ನಗರದಲ್ಲಿ ನಿರ್ಮಾಣವಾಗುತ್ತಿರುವ ಬಹುಮಹಡಿ ವಾಣಿಜ್ಯ ಕಟ್ಟಡದ ನಿರ್ಮಾಣದ ಬಗ್ಗೆ ಸ್ಥಳೀಯರಿಗೆ ಕೆಲ ಗೊಂದಲಗಳಿದ್ದು, ಬೇರೆ ಸಾರ್ವಜನಿಕರಿಗೆ ಮೂರನೇ ಮಹಡಿ ಕಟ್ಟಲು ಅವಕಾಶ ನೀಡದ ಪಾಲಿಕೆ ಅಧಿಕಾರಿಗಳು, ಇವರಿಗೆ ಐದು ಮಹಡಿಯ ಕಟ್ಟಡ ಕಟ್ಟಲು ಹೇಗೆ ಅವಕಾಶ ನೀಡಿದರು ಎಂಬ ಆಕ್ಷೇಪ ವ್ಯಕ್ತ ಪಡಿಸಿದ್ದರು.
ಅದು ಅಲ್ಲದೇ ನೀಲಿ ವಲಯದಲ್ಲಿ ನಿರ್ಮಿಸಬೇಕಾದ ವಾಣಿಜ್ಯ ಕಟ್ಟಡವನ್ನು ಕೇಸರಿ (ಆರೇಂಜ್) ವಲಯದಲ್ಲಿ ನಿರ್ಮಿಸಿದ್ದು, ಅನುಮೋದಿತ ನಕ್ಷೆಯ ಉಲ್ಲಂಘನೆ ಆಗಿದೆ, ಜೊತೆಗೆ ಕಟ್ಟಡ ಪರವಾನಿಗೆ ಪತ್ರದ ಮೇಲೆ ಕೂಡಾ ಕೆಲ ಅನುಮಾನಗಳಿದ್ದು, ಸ್ಥಳೀಯರ ಮಾಹಿತಿ ಆಧರಿಸಿ, ಈ ಕಟ್ಟಡ ನಿರ್ಮಾಣಕ್ಕೆ ಸಲ್ಲಿಸಿರುವ ದಾಖಲೆಗಳು ಹಾಗೂ ಕಟ್ಟಡ ನಿರ್ಮಾಣ ಹಂತದಲ್ಲಿ ಅಭಿಯಂತರರು ಮಾಡಿದ ಪರಿಶೀಲನಾ ವರದಿಯನ್ನು ನಾವು 29/12/2025 ರಂದು ಅರ್ಜಿಯನ್ನು ಸಲ್ಲಿಸಿ ಕೇಳಿದ್ದೆವು.
ಸಹಾಯಕ ಕಾರ್ಯಕಾರಿ ಅಭಿಯಂತರರು ಕೇಂದ್ರ ಉಪವಿಭಾಗ ಕೋನವಾಳ ಗಲ್ಲಿ ಬೆಳಗಾವಿ ಇವರು ಎಂಟು ದಿನವಾದರೂ ನಮ್ಮ ಅರ್ಜಿಗೆ ಯಾವುದೇ ಮಾಹಿತಿ ನೀಡದಿದ್ದಾಗ ಮತ್ತೆ ಕಚೇರಿಗೆ ಹೋಗಿ ನಾವು ವಿಚಾರಿಸಿದಾಗ, ದಿನಾಂಕ 13/01/2026 ರಂದು ಕಟ್ಟಡಕ್ಕೆ ಸಂಬಂದಿಸಿದ ಪರವಾನಿಗೆ ಪತ್ರ ಹಾಗೂ ಇನ್ನಿತರ ಸೂಕ್ತ ದಾಖಲೆಗಳನ್ನು 15 ದಿನದೊಳಗಾಗಿ ಹಾಜರು ಪಡಿಸಲು ಬಿಲ್ಡರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದರು.
ಅದರಂತೆ ದಿನಾಂಕ 23/01/2026 ರಂದು ಕೋನವಾಳ ಗಲ್ಲಿಯ ಕಚೇರಿಗೆ ಬಿಲ್ಡರ್ ಅವರ ಕಡೆಯಿಂದ ಹಿಂಬರಹ ಹಾಗೂ ದಾಖಲೆಗಳನ್ನು ಪೂರೈಸಿದ್ದು, ಕಚೇರಿ ಸಿಬ್ಬಂದಿ ಅವುಗಳನ್ನು ಪರಿಶೀಲಿಸಿದ್ದು, ಹಿಂಬರಹವು ಸಮಂಜಸವಾಗಿಲ್ಲ, ತಾವು ಅನುಮೋದಿತ ನಕ್ಷೆಯನ್ನು ಉಲ್ಲಂಘಸಿ ನಿರ್ಮಿಸಿರುವ ಕಟ್ಟಡದ ಭಾಗವನ್ನು ತೆರವುಗೊಳಿಸಿ, ಈ ಕಚೇರಿಗೆ ಏಳು ದಿನಗಳ ಒಳಗಾಗಿ ವರದಿ ನೀಡಬೇಕು, ತಪ್ಪಿದಲ್ಲಿ ಕೆಎಂಸಿ ಕಾಯ್ದೆಯನ್ವಯ ಸೂಕ್ತ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವದು ಎಂದು ದಿನಾಂಕ 31/01/2026 ರಂದು ಮತ್ತೊಂದು ನೋಟಿಸ್ ಜಾರಿ ಮಾಡಿತ್ತು..
ಆದರೆ ಅಧಿಕಾರಿಗಳು ನೀಡಿದ 7 ದಿನಗಳ ಗಡುವು ಮುಗಿದು, ಮತ್ತೆ ಒಂದು ತಿಂಗಳು ಅವಧಿ ಹೆಚ್ಚಾಗಿದ್ದರೂ ಆ ಬಿಲ್ಡರ್ ಮಾತ್ರ ತನ್ನ ಕಟ್ಟಡ ಕಾಮಗಾರಿಯನ್ನು ಮಾಡುತ್ತಲೇ ಹೋಗಿದ್ದು ಇನ್ನೇನು ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದೆ, ಏಳು ದಿನಗಳಲ್ಲಿ ವರದಿ ನೀಡದಿದ್ದರೆ ಕ್ರಮ ಜರುಗಿಸುತ್ತೇವೆ ಎಂದ ಇಂಜಿನಿಯರ್ ಗಳು ಕಟ್ಟಡದ ಕೆಲಸವನ್ನು ನಿಲ್ಲಿಸದೇ, ಕೈಕಟ್ಟಿ ಕುಳಿತಿದ್ದು ಯಾಕೆ? ದಾಖಲೆಗಳು ಸರಿಯಾಗಿ ಇಲ್ಲ ಎಂದು ತಿಳಿದ ಮೇಲೇಯೂ ಸುಮ್ಮನಿರುವುದು ಏಕೆ?
ಕಟ್ಟಡದ ನಿರ್ಮಾಣ ಹಂತದಲ್ಲಿ ಹೋಗಿ ಪರಿಶೀಲನೆ ಮಾಡಬೇಕಾದ ಕರ್ತವ್ಯ ಈ ಅಭಿಯಂತರರದ್ದು, ತಮ್ಮ ಕರ್ತವ್ಯ ಮಾಡದೇ, ಸಾರ್ವಜನಿಕರು ದೂರು ನೀಡಿದರೂ, ಆ ನಿಯಮಬಾಹಿರ ಕಟ್ಟಡದ ಕೆಲಸ ನಿಲ್ಲಿಸದೇ ಇರುವದು ಏಕೆ? ಸರ್ಕಾರ ಸಂಬಳ ನೀಡುವದು ಇಲಾಖೆಯ ಕೆಲಸ ಮಾಡಲು, ಸಾರ್ವಜನಿಕರಿಗೆ ಸ್ಪಂದಿಸಲು ಎಂಬ ವಿಷಯ ತಿಳಿದಿಲ್ಲವೇ? ಪಾಲಿಕೆಯ ಕೇಂದ್ರ ಉಪವಿಭಾಗದ ಇಂಜಿನಿಯರುಗಳಾದ ಅನೂಪ ಕನೋಜ ಹಾಗೂ ಅಕ್ಷತಾ ಅವರು ಇನ್ನಾದರೂ ಈ ವಿಷಯದಲ್ಲಿ ಇಲಾಖೆಯ ನಿಯಮಾವಳಿಗಳ ಪ್ರಕಾರ ಕಾರ್ಯ ನಿರ್ವಹಿಸಿ, ಸಾರ್ವಜನಿಕರ ಮನವಿಗೆ ಸ್ಪಂದಿಸಲಿ..
ವರದಿ ಪ್ರಕಾಶ್ ಬಿ ಕೆ..