ಗಣೇಶೋತ್ಸವ ವ್ಯವಸ್ಥಿತ ಆಚರಣೆಗೆ ಸಕಲ ಸಿದ್ಧತೆ..

ಗಣೇಶೋತ್ಸವ ವ್ಯವಸ್ಥಿತ ಆಚರಣೆಗೆ ಸಕಲ ಸಿದ್ಧತೆ..

ಪಾಲಿಕೆ ಆಯುಕ್ತ ಕಾರ್ತಿಕ್ ಎಂ.

ಬೆಳಗಾವಿ : ನಗರದಲ್ಲಿ ಅತ್ಯಂತ ಅದ್ಧೂರಿಯಾಗಿ ವಿಜೃಂಭಣೆಯಿಂದ ಜರುಗಲಿರುವ ಗಣೇಶೋತ್ಸವವನ್ನು ವ್ಯವಸ್ಥಿತವಾಗಿ ಆಚರಿಸುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಕಾರ್ತಿಕ್ ಎಂ ತಿಳಿಸಿದರು.

ಮಹಾನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಸೋಮವಾರ
ಈ ಕುರಿತು ಮಾಹಿತಿ ನೀಡಿದ ಅವರು, ಅತ್ಯಂತ ವಿಜ್ರಂಭಣೆಯಿಂದ ಜರುಗುವ ಬೆಳಗಾವಿಯ ಗಣೇಶ ಉತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯ, ಹೊರ ರಾಜ್ಯದಿಂದ ಜನ ಬರುವುದರಿಂದ 11 ದಿನಗಳ ಕಾಲ ನಗರದಲ್ಲಿ ದಟ್ಟಣೆ ಇರುತ್ತದೆ. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ವಿವಿಧ ಸಿದ್ಧತಾ ಕಾರ್ಯಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ.

ಮೂರ್ತಿ ವಿಸರ್ಜನಾ ಹೊಂಡಗಳನ್ನು ಪರಿಶೀಲಿಸಲಾಗಿದ್ದು, ಹೊಂಡಗಳ ಸ್ವಚ್ಛತೆ, ವಿಸರ್ಜನ ಸಂದರ್ಭದಲ್ಲಿ ಕಲ್ಪಿಸಬೇಕಾದ ತಾಂತ್ರಿಕ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚುವುದು, ಸ್ವಚ್ಛತೆ ಸಹಿತ ಮೆರವಣಿಗೆ ಮಾರ್ಗಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಉತ್ತಮ ವ್ಯವಸ್ಥೆಗಾಗಿ ಪೋಲಿಸ್, ಹೆಸ್ಕಾಂ, ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಪಾಲಿಕೆ ಸತತ ಸಂಪರ್ಕದಲ್ಲಿದ್ದು, ಸಂಯೋಜನೆಯೊಂದಿಗೆ ಕಾರ್ಯ
ನಿರ್ವಹಿಸಲಾಗುತ್ತಿದೆ ಎಂದರು.

ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮಂಡಳಿಗಳಿಗೆ ಅನುಮತಿ ನೀಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದ್ದು, ಪ್ರಕ್ರಿಯೆಯನ್ನು
ಏಕಗವಾಕ್ಷಿ ವ್ಯವಸ್ಥೆ ಅಡಿ ಕೈಗೊಳ್ಳಲಾಗುತ್ತಿದೆ. ಇದರಿಂದ ವಿವಿಧ ಇಲಾಖೆಗಳ ಅನುಮತಿ ಪಡೆಯುವ ಪ್ರಕ್ರಿಯೆ ಸರಳವಾಗಿ ಸಮಿತಿಗಳಿಗೆ ಅನುಕೂಲವಾಗಲಿದೆ ಎಂದ ಅವರು, ಗಣೇಶ ಉತ್ಸವ ಮಂಡಳಿಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಗಣೇಶೋತ್ಸವ ವ್ಯವಸ್ಥಿತವಾಗಿ ಜರುಗಲು
ಪಾಲಿಕೆ ಹಾಗೂ ವಿವಿಧ ಇಲಾಖೆಗಳಿಗೆ ಸಹಕಾರ ನೀಡಬೇಕಾಗಿ ಕೋರಿದ್ದಾರೆ.