ಬೆಳಗಾವಿ ಪಾಲಿಕೆಯಲ್ಲಿ ಆಡಳಿತ ವಿಕೇಂದ್ರೀಕರಣ ಯಾಕಾಗುತ್ತಿಲ್ಲ??

ಬೆಳಗಾವಿ ಪಾಲಿಕೆಯಲ್ಲಿ ಆಡಳಿತ ವಿಕೇಂದ್ರೀಕರಣ ಯಾಕಾಗುತ್ತಿಲ್ಲ??

ಜನರಿಗೆ ಸಿಗುವ ಸರಳ ಸೇವೆಗೆ ಅಡ್ಡಿ ಮಾಡುತ್ತಿರುವ ಕಾಣದ ಕೈ ಯಾವವು??

ಬೆಳಗಾವಿ : ಬೆಂಗಳೂರಿನ ಜಿಬಿಎ ಸಮೇತ ರಾಜ್ಯದ ಬಹುತೇಕ ಮಹಾನಗರ ಪಾಲಿಕೆಗಳಲ್ಲಿ ನ್ಯಾಯಾಲಯ ಆದೇಶದ ಪ್ರಕಾರ, ಜನರಿಗೆ ಉತ್ತಮ ಹಾಗೂ ಸರಳ ಸೇವೆ ಸಿಗಲೆಂದು ಅಧಿಕಾರದ ವಿಕೇಂದ್ರೀಕರಣ ಮಾಡಲಾಗಿದೆ, ಆದರೆ ರಾಜ್ಯದ ಉಳಿದ ಪಾಲಿಕೆಗಳಿಗಿಂತ ಬೆಳಗಾವಿ ಪಾಲಿಕೆ ವಿಭಿನ್ನ ಎನ್ನುವಂತೆ ಇಲ್ಲಿ ಮಾತ್ರ ಅಧಿಕಾರದ ವಿಕೇಂದ್ರೀಕರಣ ಇನ್ನೂ ಆಗದೇ, ತಮ್ಮ ಕೆಲಸಕ್ಕಾಗಿ ಮುಖ್ಯ ಕಚೇರಿಗೆ ಅಲೆದಾಡುವ ಪರಿಸ್ಥಿತಿಗಾಗಿ ನಗರವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರಿಗೆ ಉತ್ತಮ ಸೌಲಭ್ಯ ದೊರಕಲಿ ಹಾಗೂ ಸಮರ್ಥವಾದ ಆಡಳಿತ ಸಾಗಲಿ ಎಂಬ ಉದ್ದೇಶದಿಂದ ಪಾಲಿಕೆಗಳ ಆಡಳಿತದಲ್ಲಿ ವಿವಿಧ ವಲಯಗಳನ್ನು ನಿರ್ಮಿಸಿ, ಅಲ್ಲಿ ವಲಯ ಆಯುಕ್ತರನ್ನು ನೇಮಿಸಿ, ಆ ವಲಯದಲ್ಲಿರುವ ಜನರು ಅಲ್ಲಿಯೇ ಬಂದು ತಮ್ಮ ಕೆಲಸಗಳನ್ನು ಮಾಡಿಕೊಳ್ಳಲಿ, ತಮ್ಮ ಕೆಲಸಗಳಿಗಾಗಿ ಪದೇ ಪದೇ ಎಲ್ಲರೂ ಮುಖ್ಯ ಕಚೇರಿಗೆ ಅಲೆದಾಡದಿರಲಿ ಎಂಬ ಸದುದ್ದೇಶದಿಂದ ಸರ್ಕಾರ ವಲಯಗಳನ್ನು ರಚನೆ ಮಾಡಿ, ಅಲ್ಲಿ ವಲಯ ಆಯುಕ್ತರನ್ನು ನೇಮಿಸಿತ್ತು.

ರಾಜ್ಯದ ಬಹುತೇಕ ಪಾಲಿಕೆಗಳಲ್ಲಿ ಇದೇ ವ್ಯವಸ್ಥೆ ಜಾರಿಯಲ್ಲಿದ್ದು, ತಮ್ಮ ತಮ್ಮ ಕಾರ್ಯಗಳನ್ನು ತಮ್ಮ ವಲಯಗಳಲ್ಲೇ ಮಾಡಿಕೊಳ್ಳಲು ಜನರಿಗೆ ಅನುಕೂಲ ಆಗಿದೆ, ಆದರೆ ಬೆಳಗಾವಿ ಪಾಲಿಕೆಯಲ್ಲಿ ಮಾತ್ರ ಜನರು ಇನ್ನೂ ತಮ್ಮ ಕೆಲಸಕ್ಕಾಗಿ ಮುಖ್ಯ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದೆ. ಆಡಳಿತ, ಅಭಿವೃದ್ಧಿ, ಕಂದಾಯ, ಲೆಕ್ಕ, ನಗರ ಯೋಜನೆ ಹೀಗೆ ಎಲ್ಲಾ ವಿಭಾಗಗಳು ವಲಯ ಮಟ್ಟದಲ್ಲೇ ಆದರೆ, ಅಲ್ಲಿಯ ಜನರು ತಮ್ಮ ವಲಯಗಳಲ್ಲಿಯೇ ಬಂದು ಕೆಲಸ ಮಾಡಿಕೊಂಡು ಹೋಗುತ್ತಾರೆ.

ಬೆಳಗಾವಿ ಪಾಲಿಕೆಯಲ್ಲಿ ಈಗಾಗಲೇ ಮೂರು ವಲಯ ಕಚೇರಿ ನಿರ್ಮಿಸಿ, ಅಲ್ಲಿ ಮೂರು ವಲಯ ಆಯುಕ್ತರನ್ನು ನೇಮಿಸಿದೆ, ಆದರೆ ಅಲ್ಲಿ ಪೂರ್ಣ ಪ್ರಮಾಣದ ಅಧಿಕಾರ, ಆಡಳಿತ ವ್ಯವಸ್ಥೆಯನ್ನು ನೀಡಿಲ್ಲ, ಹೀಗಾದರೆ ಅಲ್ಲಿ ಜನರ ಕೆಲಸ ಹೇಗೆ ಆಗುತ್ತವೆ? ವಲಯ ಕಚೇರಿ ಮತ್ತು ಆಯುಕ್ತರು ಇದ್ದು ಏನೂ ಪ್ರಯೋಜನ? ಪ್ರತಿ ಕೆಲಸಕ್ಕೂ ವಲಯ ಆಯುಕ್ತರುಗಳೇ ಮುಖ್ಯ ಕಚೇರಿಗೆ ಅಲೆದಾಡುವಾಗ ಇನ್ನೂ ಜನಸಾಮಾನ್ಯರ ಕೆಲಸ ವಲಯ ಕಚೇರಿಗಳಲ್ಲಿ ಹೇಗೆ ಆಗುತ್ತವೆ? ವಲಯ ಆಯುಕ್ತರ ಕಚೇರಿಗಳಿಗೆ ಪೂರ್ಣ ಪ್ರಮಾಣದ ಅಧಿಕಾರ ಇನ್ನೂ ಏಕೆ ನೀಡುತ್ತಿಲ್ಲ? ಜನರಿಗೆ ಸಿಗುವ ಸರಳ ಸೇವೆಗೆ ಅಡ್ಡಿ ಮಾಡುತ್ತಿರುವ ಕಾಣದ ಕೈಗಳಯಾವವು? ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿವೆ.

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *