ಬೆಳಗಾವಿ ಪಾಲಿಕೆಯಲ್ಲಿ ಕನ್ನಡಿಗರ ಪಾರುಪತ್ಯ..
ಪ್ರೀತಿ ಕಾಮಕರ ಮೇಯರ್, ಹಣಮಂತ ಕೊಂಗಾಲಿ ಉಪಮೇಯರ್…
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಆಗಿ ವಾರ್ಡ್ ಸಂಖ್ಯೆ 21ರ ಪ್ರೀತಿ ವಿನಾಯಕ ಕಾಮಕರ ಹಾಗೂ ಉಪಮೇಯರ್ ಆಗಿ ವಾರ್ಡ್ ಸಂಖ್ಯೆ 46ರ ಹಣಮಂತ ಕೊಂಗಾಲಿ ಅವರು ಆಯ್ಕೆಯಾಗುವ ಮೂಲಕ ಪಾಲಿಕೆಯಲ್ಲಿ ಕನ್ನಡದ ಕಂಪನ್ನು ಚೆಲ್ಲಿದ್ದಾರೆ..
ಬುಧವಾರ ಬೆಳಗಾವಿ ಮಹಾನಗರ ಪಾಲಿಕಯಲ್ಲಿ ನಡೆದ ಮಹಾಪೌರ ಉಪ ಉಪ ಮಹಾಪೌರ ಚುನಾವಣೆಯ ಪ್ರಕ್ರಿಯೆ ನಡೆಯಿತು. ಎರಡೂ ಸ್ಥಾನಗಳು ಕನ್ನಡಿಗರ ಪಾಲಾಗಿದ್ದು ಈ ಬಾರಿಯ ವಿಶೇಷ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಇದು ನಾಲ್ಕನೇ ಅವಧಿ. ಕಳೆದ ಮೂರು ಅವಧಿಯಲ್ಲಿ ಒಂದನ್ನು ಮರಾಠರು, ಇನ್ನೊಂದು ಹುದ್ದೆಯನ್ನು ಕನ್ನಡಿಗರಿಗೆ ಹಂಚಲಾಗಿತ್ತು.
ಮೇಯರ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆ ವೇಳೆ 21ನೇ ವಾರ್ಡಿನ ಬಿಜೆಪಿ ಸದಸ್ಯೆ ಪ್ರೀತಿ ಕಾಮಕರ ಹಾಗೂ ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಸದಸ್ಯೆ ಖುರ್ಷಿದಾ ದಾದಾಪೀರ್ ಮುಲ್ಲಾ ನಾಮಪತ್ರ ಸಲ್ಲಿಸಿದರು. ಪ್ರೀತಿ ಪರವಾಗಿ 39 ಹಾಗೂ ವಿರೋಧವಾಗಿ 18 ಮತಗಳು ಬಂದವು. ಖರ್ಷಿದಾ ಪರವಾಗಿ 18 ಹಾಗೂ ವಿರೋಧವಾಗಿ 39 ಮತಗಳು ಬಂದವು, 21 ಮತಗಳ ಅಂತರದಿಂದ ಪ್ರೀತಿ ಮೇಯರ್ ಆಗಿ ಚುನಾಯಿತರಾದರು ಎಂದು ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಘೋಷಣೆ ಮಾಡಿದರು.

ನಂತರ ಉಪಮೇಯರ್ ಸ್ಥಾನಕ್ಕೆ 46ನೇ ವಾರ್ಡಿನ ಬಿಜೆಪಿ ಸದಸ್ಯ ಹಣಮಂತ ಕೊಂಗಾಲಿ ಹಾಗೂ 12ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ಮೋದಿನಸಾಬ್ ಮುತವಾಲೆ ಕಣಕ್ಕಿಳಿದರು. ಕೊಂಗಾಲಿ ಪರವಾಗಿ 39 ವಿರೋಧವಾಗಿ 20 ಜನ ಕೈ ಎತ್ತಿದರು. ಮೋದಿನಸಾಬ್ ಪರವಾಗಿ 20 ಹಾಗೂ ವಿರೋಧವಾಗಿ 39 ಜನ ಕೈ ಎತ್ತಿದರು. ಹಣಮಂತ 19 ಮತಗಳ ಅಂತರದಿಂದ ಉಪಮೇಯರ್ ಆದರು ಎಂದು ಘೋಷಣೆ ಮಾಡಲಾಯಿತು.
ಚುನಾವಣೆಯಲ್ಲಿ 6 ಮಂದಿ ಗೈರಾದರು. ಮೇಯರ್ ಮತದಾನ ವೇಳೆ ಇಬ್ಬರು ತಟಸ್ಥವಾಗಿ ಉಳಿದರು. ಉಪಮೇಯರ್ಗೆ ಎಲ್ಲರೂ ಮತ ಚಲಾಯಿಸಿದರು.
ಆಯ್ಕೆ ಘೋಷಿಸಿದ ಬಳಿಕ ಎಲ್ಲ ಸದಸ್ಯರು ಟೇಬಲ್ ಕುಟ್ಟಿ ಹರ್ಷ ವ್ಯಕ್ತಪಡಿಸಿದರು. ಆಡಳಿತ ಬಿಜೆಪಿ ಪಕ್ಷದ ಸದಸ್ಯರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಮೊಳಗಿಸಿದರು.
ಈ ವೇಳೆ ಶಾಸಕ ಅಭಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಬಿಜೆಪಿ ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕ ಅನಿಲ ಬೆನಕೆ ಕೂಡ ಹಾಜರಿದ್ದು ಶುಭಾಶಯ ಕೋರಿದರು.